ಮೈಷುಗರ್ ಕಾರ್ಖಾನೆಗೆ ಮರು ಜೀವ ನೀಡಿದ್ದು ನಮ್ಮ ಸರ್ಕಾರ: ವಿಪಕ್ಷಗಳಿಗೆ ಬಿಜೆಪಿ ತಿರುಗೇಟು

ಹೊಸದಿಗಂತ ವರದಿ, ಮಂಡ್ಯ :
ಮೈಷುಗರ್ ಸಕ್ಕರೆ ಕಾರ್ಖಾನೆಗೆ ಮರು ಜೀವ ಕೊಡುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ತಿಳಿಸಿದರು.
ಕಳೆದ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಾರ್ಖಾನೆಗೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 184 ಕೋಟಿ ರೂ.ಗಳ ಅನುದಾನ ನೀಡಿ ಮೈಷುಗರ್ ಜೊತೆಗೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೂ ಜೀವದಾನ ಮಾಡಿದ್ದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಪುನಶ್ಚೇತನಗೊಳಿಸುವಲ್ಲಿ ವಿಲರಾಗಿದ್ದರು ಎಂದು ದೂರಿದರು.
ಈ ಎರಡೂ ಪಕ್ಷಗಳ ಸರ್ಕಾರಗಳು ಮೈಷುಗರ್ ಪುನಶ್ಚೇತನಕ್ಕೆ ಸಾಲದ ರೂಪದಲ್ಲಿ ಹಣ ಕೊಡುವ ನಾಟಕ ವಾಡಿ ಮತ್ತೊಂದು ಕಡೆಯಿಂದ ಸಾಲ ವಾಪಸ್ಸು ಪಡೆದುಕೊಂಡು ಕಾರ್ಖಾನೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದರು ಎಂದು ಆರೋಪಿಸಿದರು.
ರಾಜ್ಯದ ಇತಿಹಾಸದಲ್ಲೇ ಇದೀಗ ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಷುಗರ್‌ಗೆ ಮರುಜೀವ ನೀಡಿ ಈ ಭಾಗದ ರೈತರಿಗೆ ಮಾತುಕೊಟ್ಟಂತೆ ನಡೆದುಕೊಂಡಿದ್ದಾರೆ. ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುವ ಮುನ್ನ ಪ್ರತಿ ಟನ್ ಕಬ್ಬಿಗೆ 800 ರೂ. ನೀಡಲಾಗುತ್ತಿತ್ತು. ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಪ್ರತಿ ಟನ್ ಕಬ್ಬಿಗೆ 2450 ರೂ.ಗಳನ್ನು ನೀಡಿದ್ದರು ಎಂದು ಹೇಳಿದರು.
ಕಾರ್ಖಾನೆ ಮತ್ತು ಅದರ ಆಸ್ತಿಯನ್ನು ಸರ್ಕಾರದ ಒಡೆತನದಲ್ಲೇ ಇಟ್ಟುಕೊಂಡು ಕಾರ‌್ಯ ಮತ್ತು ನಿರ್ವಹಣೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಮೂಲಕ ಅನುದಾನವನ್ನೂ ಸರ್ಕಾರವೇ ನೀಡಿ ಕಾರ್ಖಾನೆಯನ್ನು ಮುನ್ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಮಂಡ್ಯ ಬೆಲ್ಲಕ್ಕೆ ಮಾನ್ಯತೆ ದೊರೆತಿದ್ದು, ಹಲವಾರು ವರ್ಷಗಳಿಂದ ಮುಚ್ಚಿದ್ದ ಹಲವಾರು ಕಬ್ಬಿನ ಗಾಣಗಳು ತಮ್ಮ ಚಟುವಟಿಕೆಯನ್ನು ಪ್ರಾರಂಭಿಸಿವೆ. ಇದರಿಂದಾಗಿ ಮಂಡ್ಯ ಬೆಲ್ಲಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಬೆಲ್ಲದ ಗುಣಮಟ್ಟವೂ ಉತ್ತಮವಾಗಿದೆ. ಇದರಿಂದಾಗಿ ಬೇರೆ ಬೇರೆ ಕಡೆಗಳಲ್ಲೂ ಸಹ ಬೇಡಿಕೆ ಹೆಚ್ಚಾಗಿದೆ. ಇದು ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ ಎಂಬುದನ್ನು ವಿಪಕ್ಷಗಳು ಮನಗಾಣಬೇಕಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!