July 17, 2026
Friday, July 17, 2026
spot_img

ಮನೆಯ ಆವರಣದಲ್ಲಿ 24 ಗಂಟೆಗಳ ಅವಧಿಯಲ್ಲಿ ಪತ್ತೆಯಾಯಿತು ಬರೋಬ್ಬರಿ 18 ಹೆಬ್ಬಾವಿನ ಮರಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ತ್ರಿಶೂರ್ ಜಿಲ್ಲೆಯ ಪೂಂಕುನ್ನಂನ ಎಂ.ಜಿ ನಗರದಲ್ಲಿ ಮನೆಯೊಂದರ ಆವರಣದಲ್ಲಿ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 18 ಹೆಬ್ಬಾವಿನ ಮರಿಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಕಾರ್ತಿಕ್ ಎಂಬುವವರ ಮನೆಯ ಪಕ್ಕದ ಕಾಲುವೆ ಬಳಿ ಅವರ ಸಹೋದರ ಮೊದಲು ಎರಡು ಸಣ್ಣ ಹಾವಿನ ಮರಿಗಳನ್ನು ಗಮನಿಸಿದ್ದು, ಬಳಿಕ ನಡೆಸಿದ ಪರಿಶೀಲನೆಯಲ್ಲಿ ಮನೆಯ ಸುತ್ತಮುತ್ತ ಇನ್ನೂ ಹಲವು ಮರಿಗಳು ಕಂಡುಬಂದಿವೆ. ಮೊದಲ ದಿನ ಸುಮಾರು ಎಂಟು ಮರಿಗಳನ್ನು ಸುರಕ್ಷಿತವಾಗಿ ಹಿಡಿಯಲಾಗಿದ್ದು, ಎರಡು ಮರಿಗಳು ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ತಿಳಿದುಬಂದಿದೆ.

ಮರುದಿನ ಅರಣ್ಯ ಇಲಾಖೆ ಮತ್ತು ಹಾವು ರಕ್ಷಕರ ತಂಡ ಮತ್ತೊಮ್ಮೆ ಕಾರ್ಯಾಚರಣೆ ನಡೆಸಿದಾಗ ಇನ್ನೂ 10 ಹೆಬ್ಬಾವಿನ ಮರಿಗಳು ಪತ್ತೆಯಾಗಿವೆ. ಕೆಲವು ಮರಿಗಳು ಮನೆಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್‌ನ ಒಳಭಾಗದಲ್ಲೂ ಅಡಗಿಕೊಂಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಪ್ರಾಥಮಿಕ ಅಂದಾಜಿನ ಪ್ರಕಾರ, ಇತ್ತೀಚಿನ ಭಾರೀ ಮಳೆಯಿಂದಾಗಿ ಮನೆಯ ಸಮೀಪದ ಕಾಲುವೆಯ ಮೂಲಕ ಬಂದ ಹೆಬ್ಬಾವೊಂದು ತಳಪಾಯ ಅಥವಾ ಕಾಂಪೌಂಡ್ ಗೋಡೆಯ ಸಂದಿಗಳಲ್ಲಿ ಮೊಟ್ಟೆ ಇಟ್ಟಿರಬಹುದು. ಇದೀಗ ಆ ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿರಬಹುದೆಂದು ಶಂಕಿಸಲಾಗಿದೆ. ತಾಯಿ ಹೆಬ್ಬಾವು ಅಥವಾ ಇನ್ನೂ ಕೆಲವು ಮರಿಗಳು ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಮನೆಯ ಆವರಣ ಮತ್ತು ಕಾಂಪೌಂಡ್ ಗೋಡೆಯ ಭಾಗಗಳನ್ನು ಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !