November 16, 2026
Monday, November 16, 2026
spot_img

‘ಮಹಾಸಾಗರ’ ದೂರದೃಷ್ಟಿಯಲ್ಲಿ ಆಸಿಯಾನ್‌ಗೆ ಪ್ರಮುಖ ಸ್ಥಾನ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗಿನ ಭಾರತದ ಹೆಚ್ಚುತ್ತಿರುವ ಸಹಭಾಗಿತ್ವದ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿಹೇಳಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ ಭಾರತದ ‘ಆಕ್ಟ್ ಈಸ್ಟ್’ ನೀತಿಯ ಪ್ರಮುಖ ಆಧಾರಸ್ತಂಭವಾಗಿದ್ದು, ‘ಮಹಾಸಾಗರ’ ದೂರದೃಷ್ಟಿಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದಾರೆ.

ಮಹಾಸಾಗರ ಎಂದರೆ ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಹಾಗೂ ಸಮಗ್ರ ಪ್ರಗತಿ ಎಂದರ್ಥ. ಇದು 2015ರಲ್ಲಿ ಘೋಷಿಸಲಾದ ಸಾಗರ ಪರಿಕಲ್ಪನೆಯ ವಿಸ್ತೃತ ರೂಪವಾಗಿದ್ದು, ಭಾರತದ ವಿಸ್ತರಿತ ಸಾಗರ ಕಾರ್ಯತಂತ್ರದ ಉಪಕ್ರಮವಾಗಿದೆ. ಇಂದು ಮತ್ತು ನಾಳೆ ಫಿಲಿಪ್ಪೀನ್ಸ್‌ಗೆ ಎರಡು ದಿನಗಳ ಭೇಟಿ ನೀಡುವ ಮುನ್ನ ಮೋದಿ ಈ ಹೇಳಿಕೆ ನೀಡಿದ್ದಾರೆ. ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ಅವರು 23ನೇ ಆಸಿಯಾನ್-ಭಾರತ ಶೃಂಗಸಭೆ ಹಾಗೂ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ತಮ್ಮ ಪ್ರಯಾಣದ ಮುನ್ನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಆಸಿಯಾನ್‌ನೊಂದಿಗಿನ ಭಾರತದ ಸಂಬಂಧವು ಶತಮಾನಗಳಷ್ಟು ಹಳೆಯ ಸಾಂಸ್ಕೃತಿಕ ಮತ್ತು ನಾಗರಿಕತೆಯ ನಂಟನ್ನು ಆಧರಿಸಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ವರ್ಷಗಳ ಕಳೆದಂತೆ ಈ ಐತಿಹಾಸಿಕ ಸಂಬಂಧಗಳು ವ್ಯಾಪಾರ, ಮೂಲಸೌಕರ್ಯ ಸಂಪರ್ಕ, ಸಾಗರ ಸಹಕಾರ, ತಂತ್ರಜ್ಞಾನ ಹಾಗೂ ಜನರ ನಡುವಿನ ವಿನಿಮಯ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಂಡ ಸಮಗ್ರ ಪಾಲುದಾರಿಕೆಯಾಗಿ ವಿಸ್ತರಿಸಿವೆ ಎಂದಿದ್ದಾರೆ.

ಮುಂಬರುವ ಆಸಿಯಾನ್-ಭಾರತ ಶೃಂಗಸಭೆಯ ಮಹತ್ವವನ್ನು ಒತ್ತಿಹೇಳಿದ ಮೋದಿ, ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಹಾಗೂ ಆರ್ಥಿಕ ಅಭಿವೃದ್ಧಿ, ಸಂಪರ್ಕ ಮತ್ತು ಹಂಚಿಕೆಯ ಸಮೃದ್ಧಿಗೆ ಸಂಬಂಧಿಸಿದ ಸಾಮಾನ್ಯ ಗುರಿಗಳನ್ನು ಮುನ್ನಡೆಸಲು ಪ್ರಾದೇಶಿಕ ನಾಯಕರೊಂದಿಗೆ ಮಾತುಕತೆ ನಡೆಸಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ತುರ್ತು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಚರ್ಚಿಸಲು ಪೂರ್ವ ಏಷ್ಯಾ ಶೃಂಗಸಭೆಯೂ ಮಹತ್ವದ ವೇದಿಕೆಯಾಗಿದೆ ಎಂದು ತಿಳಿಸಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಹಾಗೂ ನಿಕಟ ಸಹಕಾರವನ್ನು ಉತ್ತೇಜಿಸುವ ಕುರಿತು ಪಾಲ್ಗೊಳ್ಳುವ ರಾಷ್ಟ್ರಗಳ ನಾಯಕರೊಂದಿಗೆ ಚರ್ಚೆ ನಡೆಯಲಿದೆ ಎಂದಿದ್ದಾರೆ.

Must Read