ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೀಪ್ ಫೇಕ್ ವಿಡಿಯೋ ಹಾವಳಿ ಹೆಚ್ಚುತ್ತಿದ್ದು, ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಡೀಪ್ ಫೇಕ್ ವಿಡಿಯೋ ಮಾಡಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ಇಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಭಿಮಾನಿಗಳು ದೂರು ದಾಖಲಿಸಿದ್ದಾರೆ.
ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಡೀಪ್ ಫೇಕ್ ವಿಡಿಯೋ ಹರಿಬಿಟ್ಟು, ಕೆಟ್ಟ ಕಮೆಂಟ್ ಗಳನ್ನು ಹಾಕಿ ಟ್ರೋಲ್ ಮಾಡಲಾಗಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ ಕುಮಾರ್ ಕುಟುಂಬದ ಅಭಿಮಾನಿಗಳ ಸಂಘದ ಸದಸ್ಯರು ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸ್ ಆಯುಕ್ತರುಗೂ ದೂರು ನೀಡುತ್ತೇವೆ. ನಕಲಿ ಖಾತೆಗಳ ಮೂಲಕ ಇಂಥಹ ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗುತ್ತಿದೆ. ಯಾರ ಬಗ್ಗೆಯೇ ಆಗಲಿ ಅಸಭ್ಯವಾಗಿ ಕಮೆಂಟ್ ಮಾಡುವುದು, ಅಶ್ಲೀಲವಾಗಿ ವಿಡಿಯೋ ಎಡಿಟ್ ಮಾಡಿ ಹಾಕುವುದು, ಹೀಗೆ ಯಾರೂ ಯಾರ ಬಗ್ಗೆಯೂ ಮಾಡಬಾರದು. ಇಂತಹ ಕೃತ್ಯಗಳಿಗೆ ಕಡಿವಾಣಣಹಾಕಬೇಕು. ಸೋಷಿಯಲ್ ಮೀಡಿಯಾಗೆ ಆಧಾರ್ ಲಿಂಕ್ ಕಡ್ಡಾಯಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದರು.