ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕಾರ್ಯ ಆರಂಭ: ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋ ಬಸ್ತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಮೇರೆಗೆ ಇಂದು ಭಾರತೀಯ ಪುರಾತತ್ವ ಇಲಾಖೆಯು ಸಮೀಕ್ಷೆ ಕಾರ್ಯ ಆರಂಭಿಸಿದೆ. ಎಎಸ್‌ಐ ತಂಡ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದಲೇ ಸಮೀಕ್ಷೆ ಕಾರ್ಯ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಶುಕ್ರವಾರದಂದು ಪ್ರಾರ್ಥನೆ ಇರುವ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಸಮೀಕ್ಷೆ ನಡೆಯಲಿದೆ. ಎಎಸ್‌ಐ ಸಮೀಕ್ಷಾ ತಂಡದಲ್ಲಿ ಒಟ್ಟು 32 ಮಂದಿ ಎಸ್‌ಐ, 7 ಮಂದಿ ಹಿಂದೂ ಹಾಗೂ ಒಂಬತ್ತು ಮಂದಿ ಮುಸ್ಲಿಂ ಸಮುದಾಯದ ಸದಸ್ಯರಿದ್ದಾರೆ.

ಜ್ಞಾನವಾಪಿಯಲ್ಲಿ ಸರ್ವೆ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದು, ಇಂದು ಅದರ ವಿಚಾರಣೆ ನಡೆಯಲಿದೆ.

ಇಂದು ಬೆಳಗ್ಗೆಯಿಂದ ಪ್ರಾರಂಭವಾಗಿರುವ ಸಮೀಕ್ಷೆ ಪ್ರಕ್ರಿಯೆಯಲ್ಲಿ, 43 ಜನರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಮಂಜು ವ್ಯಾಸ್ ಮತ್ತು ಹಿಂದೂ ಪರ ವಕೀಲರಾದ ಹರಿಶಂಕರ್ ಮತ್ತು ವಿಷ್ಣು ಜೈನ್, ಸುಧೀರ್ ತ್ರಿಪಾಠಿ ಅವರ ಹೆಸರನ್ನು ಸೇರಿಸಲಾಗಿಲ್ಲ.

ಜುಲೈ 21 ರಂದು ಸಿವಿಲ್ ನ್ಯಾಯಾಲಯ ಸಮೀಕ್ಷೆಗೆ ಅನುಮತಿ ನೀಡಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಜುಲೈ 24 ರಂದು ಸಮೀಕ್ಷೆ ನಡೆಯುತ್ತಿರುವಾಗಲೇ ಅದಕ್ಕೆ ಸುಪ್ರೀಂನಿಂದ ತಡೆಯಾಜ್ಞೆ ನೀಡಲಾಗಿತ್ತು. ಜುಲೈ 27ರಂದು ಹೈಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆಯಾಗಿದ್ದು, ಗುರುವಾರ ಹೈಕೋರ್ಟ್ ಸಮೀಕ್ಷೆಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಮೀಕ್ಷೆ ಕಾರ್ಯ ಆರಂಭಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!