ಏಷ್ಯಾಕಪ್ ಆತಿಥ್ಯ ಗೊಂದಲ: ಪಾಕ್ ಬಿಟ್ಟು ಮ್ಯಾಚ್ ಆಯೋಜನೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
 
ಏಷ್ಯಾಕಪ್ ಆತಿಥ್ಯ ಕುರಿತು ಕಳೆದ ಕೆಲವು ದಿನಗಳಿಂದ ಉಂಟಾಗುತ್ತಿರುವ ಗೊಂದಲ ಇನ್ನೂ ಪರಿಹಾರವಾಗಿಲ್ಲ. ಇದೀಗ ಏಷ್ಯಾಕಪ್ ಆತಿಥ್ಯ ವಿಚಾರದಲ್ಲಿ ಪಿಸಿಬಿ ಮುಖ್ಯಸ್ಥ ನಜಾಮ್ ಸೇಥಿ ಸೂಚಿಸಿದ ಹೈಬ್ರಿಡ್ ಮಾದರಿಯನ್ನು ಭಾರತ ತಿರಸ್ಕರಿಸಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ.

ಹೈಬ್ರಿಡ್ ಮಾದರಿಯಲ್ಲಿ 4 ಅಥವಾ 5 ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡುವುದು ಮತ್ತು ಭಾರತದ ಎಲ್ಲಾ ಪಂದ್ಯಗಳು ಸೇರಿದಂತೆ ಉಳಿದ ಪಂದ್ಯಗಳನ್ನು ದುಬೈನಲ್ಲಿ ಆಡುವುದು ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಯೋಜನೆಯಾಗಿದೆ. ಆದರೆ, ಈ ಯೋಜನೆಯನ್ನು ಎಸಿಸಿ ತಿರಸ್ಕರಿಸಿದೆ.

ಒಂದು ವೇಳೆ ಪಾಕಿಸ್ತಾನ ತನ್ನ ಹಠಮಾರಿತನ ಮುಂದುವರಿಸಿದರೆ ಆ ತಂಡವನ್ನೇ ಹೊರಗಿಟ್ಟು ಟೂರ್ನಿ ನಡೆಸುವುದು ಎಸಿಸಿ ಮುಂದಿನ ಯೋಜನೆ.

ಅಹ್ಮದಾಬಾದ್​​ನಲ್ಲಿ ನಡೆಸಿದ್ದ ಏಷ್ಯಾ ಕ್ರಿಕೆಟ್​ ಕೌನ್ಸಿಲ್​ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ನಡೆಸಲಾದ ಅನೌಪಚಾರಿಕ ಚರ್ಚೆಯ ಸಂದರ್ಭದಲ್ಲಿ ಪಂದ್ಯಾವಳಿಯನ್ನು ಒಂದು ರಾಷ್ಟ್ರದಲ್ಲಿ ಮಾತ್ರ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಗೊಂಡಿದ್ದವು. ಪಾಕಿಸ್ತಾನ ಅದಕ್ಕೆ ಒಪ್ಪದಿದ್ದರೆ ಶ್ರೀಲಂಕಾದಲ್ಲಿ ನಡೆಸುವುದು ಯೋಜನೆಯಾಗಿದೆ. ಇದೇ ವೇಳೆ ಪಾಕಿಸ್ತಾನ ಸೂಚಿಸಿರುವ ಹೈಬ್ರಿಡ್​ ಮಾದರಿ ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸೆಪ್ಟೆಂಬರ್​ನಲ್ಲಿ ಯುಎಇನಲ್ಲಿ ಅತಿಯಾದ ಉಷ್ಣಾಂಶ ಇರುವ ಕಾರಣ ಆಡುವುದು ಅಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಗೊಂಡಿದೆ. ಜಯ್​ ಶಾ ಈ ಅಭಿಪ್ರಾಯಕ್ಕೆ ಉಳಿದ ದೇಶಗಳು ಸಮ್ಮತಿ ಸೂಚಿಸಿವೆ.

ಎಲ್ಲಾ ರಾಷ್ಟ್ರಗಳು ಶ್ರೀಲಂಕಾದಲ್ಲಿ ಆಡಲು ಒಪ್ಪಿಕೊಂಡಿವೆ. ಈ ಮಾಹಿತಿಯನ್ನು ಎಸಿಸಿಯ ಮುಂದಿನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ತಿಳಿಸಲು ಯೋಜನೆ ರೂಪಿಸಲಾಗಿದೆ. ಈ ವರ್ಷ ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್ ಆತಿಥ್ಯ ವಹಿಸಲಿರುವ ಪಿಸಿಬಿ, ಸಮರ್ಥ ಯೋಜನೆ ರೂಪಿಸಲು ವಿಫಲಗೊಂಡಿದೆ.

ಒಂದು ವೇಳೆ ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯಿಂದ ಹಿಂದೆ ಸರಿದರೆ, ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಮಾತ್ರ ಪಟ್ಟಿಯಲ್ಲಿ ಉಳಿಯಲಿವೆ. ಹೀಗಾಗಿ ಐದನೇ ತಂಡ ಸೇರಿಸುವ ಬಗ್ಗೆ ಯೋಜನೆ ರೂಪುಗೊಳ್ಳಲಿದೆ. ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಬಿಸಿಸಿಐ ನಿರಾಕರಿಸಿರುವುದು ಮತ್ತು ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಿರುವುದು ಕ್ರಿಕೆಟ್​ ಕ್ಷೇತ್ರದಲ್ಲಿ ತೀವ್ರ ಪರಿಣಾಮ ಬೀರಬಹುದು. ಏಕೆಂದರೆ ಭಾರತವು ಅಕ್ಟೋಬರ್-ನವೆಂಬರ್​ನಲ್ಲಿ 2023ರ ಏಕದಿನ ವಿಶ್ವ ಕಪ್​ಗೆ ಆತಿಥ್ಯ ವಹಿಸಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!