ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌: ಚಿನ್ನ ಗೆದ್ದ ಸಾತ್ವಿಕ್-ಚಿರಾಗ್ ಶೆಟ್ಟಿಗೆ ಭೇಷ್, ಭೇಷ್ ಎಂದ ಪ್ರಧಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಇತಿಹಾಸ ಸೃಷ್ಟಿಸಿದ್ದು, ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಇಯೊ ಯೀ ಜೋಡಿಯನ್ನು ಸೋಲಿಸಿ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಓಂಗ್ ಯೂ ಸಿನ್ ಮತ್ತು ಟಿಯೊ ಇಯೊ ಯೀ ಜೋಡಿ ವಿರುದ್ಧ ನಡೆದ ಫೈನಲ್ ಫೈಟ್​ನಲ್ಲಿ ಮೊದಲ ಗೇಮ್ ಅನ್ನು 16-21 ರಲ್ಲಿ ಕಳೆದುಕೊಂಡಿದ್ದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಆ ಬಳಿಕ ಬಲಿಷ್ಠವಾಗಿ ಕಮ್ ಬ್ಯಾಕ್ ಮಾಡಿದರು. ಅಲ್ಲದೆ ಎರಡನೇ ಗೇಮ್ ಅನ್ನು 21-17 ಮತ್ತು ಮೂರನೇ ಗೇಮ್ ಅನ್ನು 21-19 ಅಂತರಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದರು.

ಭಾರತಕ್ಕೆ ಮೊದಲ ಚಿನ್ನದ ಪದಕ:
ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ. ಇದಕ್ಕೂ ಮುನ್ನ ದೀಪ್ ಘೋಸ್ ಮತ್ತು ರಾಮನ್ ಘೋಸ್ ಜೋಡಿ 1971ರಲ್ಲಿ ನಡೆದ ಈ ಟೂರ್ನಿಯಲ್ಲಿ ಸೆಮಿಫೈನಲ್‌ವರೆಗೆ ತಲುಪಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ:
ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಇತಿಹಾಸ ಸೃಷ್ಟಿಸುತ್ತಿದ್ದಂತೆ, ಪ್ರಧಾನಿ ಮೋಡಿ ಇಬ್ಬರು ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಪುರುಷರ ಡಬಲ್ಸ್ ಜೋಡಿಗೆ ಅಭಿನಂದನೆಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಟ್ವಿಟರ್​ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!