ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ರಾಜಗೀರ್ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಚೀನಾ ಮಹಿಳಾ ಹಾಕಿ ತಂಡವನ್ನು ಮಣಿಸಿ ಭಾರತ ತಂಡ ಮೂರನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಸಲೀಮಾ ಟೆಟೆ ನಾಯಕತ್ವದಲ್ಲಿ ಭಾರತ ತಂಡ ಈ ಪಂದ್ಯದಲ್ಲಿ ಚೀನಾವನ್ನು 1-0 ಗೋಲುಗಳಿಂದ ಸೋಲಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕಿರೀಟ ತೊಟ್ಟುಕೊಂಡಿದೆ.
ಭಾರತ ಮತ್ತು ಚೀನಾ ನಡುವೆ ನಡೆದ ಅಂತಿಮ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಈ ಎರಡೂ ತಂಡಗಳಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಮೊದಲಾರ್ಧದಲ್ಲಿ ಭಾರತಕ್ಕೆ ನಾಲ್ಕು ಪೆನಾಲ್ಟಿ ಕಾರ್ನರ್ ಸಿಕ್ಕರೆ, ಚೀನಾಕ್ಕೆ ಎರಡು ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ, ಎರಡೂ ತಂಡಗಳು ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದವು.
ಮೂರನೇ ಕ್ವಾರ್ಟರ್ ಆರಂಭವಾದ 30 ಸೆಕೆಂಡುಗಳಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರತದ ದೀಪಿಕಾ ಯಶಸ್ವಿಯಾದರು. ಹೀಗಾಗಿ ಭಾರತ ತಂಡ ಪಂದ್ಯದಲ್ಲಿ ಒಂದು ಗೋಲಿನ ಮುನ್ನಡೆ ಸಾಧಿಸಿತು. ನಾಲ್ಕನೇ ಕ್ವಾರ್ಟರ್‌ನಲ್ಲಿ ಚೀನಾ ಆಟಗಾರರ ತಪ್ಪಿನಿಂದ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಸಿಕ್ಕಿತು. ಆದರೆ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರತ ಯಶಸ್ವಿಯಾಗಲಿಲ್ಲ.
ಇದಾದ ಬಳಿಕ ಚೀನಾ ಆಟಗಾರ್ತಿಯರು ಆಕ್ರಮಣಕಾರಿ ನಿಲುವು ತಳೆದರು. ಆದರೆ, ಚೀನಾಕ್ಕೆ ಭಾರತೀಯ ಸಿಂಹಿಣಿಯರ ವಿರುದ್ಧ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಭಾರತ ಮಹಿಳಾ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದಿದ್ದು ಇದು ಮೂರನೇ ಬಾರಿ. ಈ ಹಿಂದೆ 2016 ಮತ್ತು 2023ರಲ್ಲಿಯೂ ಭಾರತ ಗೆದ್ದಿತ್ತು. 2016ರಲ್ಲಿಯೂ ಭಾರತ ಫೈನಲ್‌ನಲ್ಲಿ ಚೀನಾವನ್ನು ಮಣಿಸಿದ್ದರೆ, 2023ರಲ್ಲಿ ಜಪಾನ್ ತಂಡವನ್ನು ಸೋಲಿಸಿತ್ತು.