ಹೊಸದಿಗಂತ ವರದಿ,ಮಂಡ್ಯ:
ಕಿಕ್ಕೇರಿ ಹೋಬಳಿಯ ಬಯಲು ಸೀಮೆ ಸುಬ್ರಹ್ಮಣ್ಯವಾಗಿರುವ ಶರಣರ ಗ್ರಾಮವಾದ ಸಾಸಲು ಗ್ರಾಮದಲ್ಲಿನ ಮುಜರಾಯಿ ಇಲಾಖೆಯ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ತಿಕ ಮಾಸದ 3ನೇವಾರದ ಸೋಮವಾರದ 7ದಿನಗಳ ಎಣಿಕೆ ಹಣ ಕಾರ್ಯವನ್ನು ಮುಜರಾಯಿ ಅಧಿಕಾರಿ ತಹಶೀಲ್ದಾರ್ ಅಶೋಕ್ ಮಾರ್ಗದರ್ಶನದಲ್ಲಿ ಉಪತಹಶೀಲ್ದಾರ್ ವೀಣಾ ನೇತೃತ್ವದಲ್ಲಿ ಜರುಗಿತು. ಹುಂಡಿ ಎಣಿಕೆ ಕಳವು ಹಿನ್ನೆಲೆಯಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿ ವಾರ ಎಣಿಕೆ ನಡೆಯಲಾಗುತ್ತಿದೆ.
ಹುಂಡಿ ಎಣಿಕೆಯಲ್ಲಿ ಎರಡು ದೇಗುಲಗಳಿಂದ ಒಟ್ಟು 11,23,318ರೂ. ಕಾಣಿಕೆ ರೂಪದಲ್ಲಿ ಹಣ ಸಂಗ್ರಹವಾಗಿತ್ತು. ಇದರ ಜೊತೆಯಲ್ಲಿ 3ಗ್ರಾಂ. ಚಿನ್ನದ ಉಂಗುರು ಹಾಗೂ 300ಗ್ರಾಂ. ಬೆಳ್ಳಿಯನ್ನು ಹರಿಕೆ ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಯಲ್ಲಿ ಹಾಕಿದ್ದರು.
ಸೋಮೇಶ್ವರ ಹಾಗೂ ಶಂಭುಲಿಂಗೇಶ್ವರ ಬಾಲಾಲಯ ದೇಗುಲದಲ್ಲಿರುವ ಒಟ್ಟು 22ಹುಂಡಿಗಳನ್ನು ಬೆಳಗ್ಗಿನಿಂದ ಸಂಜೆಯವರೆಗೆ ಕಿಕ್ಕೇರಿ ಪೊಲೀಸರ ಸರ್ಪಗಾವಲಿನಲ್ಲಿ ಎಣಿಕೆ ಮಾಡಲಾಯಿತು.
ಕಾಣಿಕೆ ಹಣವನ್ನು ಕೆ.ಆರ್. ಪೇಟೆ ಬ್ಯಾಂಕ್ ಆಫ್ ಬರೋಡಾದ ದೇಗುಲದ ಮುಜರಾಯಿ ಖಾತೆಗೆ ಜಮಾಕರಿಸಲಾಯಿತು.
ಉಪತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಡಿ. ಆರ್. ನರೇಂದ್ರ, ಗ್ರಾಮ ಆಡಳಿತಾಧಿಕಾರಿ ಬಿ.ಎಂ. ಪ್ರಸನ್ನ, ಸೋಮಾಚಾರ್, ತಿಪ್ಪೇಶ್, ಸುನೀಲ್‌ಗಾಣಿಗೇರ್, ಹರ್ಷಿತಾ, ವನಜಾಕ್ಷಿ ಮುಜರಾಯಿ ಸಹಾಯಕಿ ಪೂರ್ಣಿಮಾ, ಗ್ರಾಮ ಸಹಾಯಕರು, ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ, ಗ್ರಾಮ ಮುಖಂಡರು ಭಾಗವಹಿಸಿದ್ದರು.