September 30, 2026
Wednesday, September 30, 2026
spot_img

ಏಷ್ಯನ್ ಗೇಮ್ಸ್ 2026: ವಿಶ್ವದಾಖಲೆ ಸರಿಗಟ್ಟಿ ಏಷ್ಯನ್ ಅಖಾಡದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಲೇಡಿ ಆರ್ಚರ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಅಖಾಡದಲ್ಲಿ ಭಾರತದ ಕ್ರೀಡಾಪಟುಗಳು ಸನ್ಸೇಷನಲ್ ಪ್ರದರ್ಶನ ಮುಂದುವರಿಸಿದ್ದು, ಭಾರತದ ಹೆಣ್ಣುಮಕ್ಕಳು ಜಗತ್ತೇ ತಿರುಗಿ ನೋಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬುಧವಾರ ನಡೆದ ಅತ್ಯಂತ ರೋಮಾಂಚನಕಾರಿ ಮಹಿಳೆಯರ ಕಾಂಪೌಂಡ್ ಆರ್ಚರಿ ತಂಡ ವಿಭಾಗದ ಫೈನಲ್ ಪಂದ್ಯದಲ್ಲಿ ಪ್ರಬಲ ಚೀನಾ ತಂಡವನ್ನು ಮಣಿಸಿದ ಭಾರತದ ‘ಗೋಲ್ಡನ್ ತ್ರಿವಳಿಗಳಾದ’ ಜ್ಯೋತಿ ಸುರೇಖಾ ವೆನ್ನಂ, ಚಿಕಿತಾ ತನಿಪಾರ್ತಿ ಮತ್ತು ಪ್ರೀತಿಕಾ ಪ್ರದೀಪ್ ಭಾರತಕ್ಕೆ ಮತ್ತೊಂದು ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.

ಈ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತೀಯ ಬಿಲ್ಲುಗಾರ್ತಿಯರು ಎದುರಾಳಿ ಚೀನಾಗೆ ಚೇತರಿಸಿಕೊಳ್ಳಲು ಅವಕಾಶವೂ ನೀಡಲಿಲ್ಲ. ಆರಂಭಿಕ ರೌಂಡ್‌ನಿಂದಲೇ ಅತ್ಯಂತ ಕಟ್ಟುನಿಟ್ಟಾದ ಹಾಗೂ ನಿಖರವಾದ ಗುರಿಯೊಂದಿಗೆ ದಾಳಿ ಆರಂಭಿಸಿದ ಭಾರತ, 238 – 234 ಅಂಕಗಳ ಅಂತರದಲ್ಲಿ ಚೀನಾವನ್ನು ಸಂಪೂರ್ಣವಾಗಿ ಸೋಲಿಸಿತು.

ಫೈನಲ್ ಪಂದ್ಯದ ಮೊದಲ ಸರದಿಯಲ್ಲೇ ಚೀನಾ ಆಟಗಾರ್ತಿಯರು ಒತ್ತಡಕ್ಕೆ ಸಿಲುಕಿ ಒಂಬಂತ್ತು ಅಂಕಗಳನ್ನು ಪಡೆದು ಒಟ್ಟು 27 ಅಂಕಗಳ ಸಾಧಾರಣ ಆರಂಭ ಪಡೆದರು. ಆದರೆ, ಇದನ್ನು ತಮಗೆ ಸಿಕ್ಕ ಅವಕಾಶವೆಂದು ಬಳಸಿಕೊಂಡ ಭಾರತ, ಮೊದಲ ಮೂರೂ ಬಾಣಗಳನ್ನು ನೇರವಾಗಿ ’10’ ರ ಬುಲ್ಸ್ ಐ ಪಾಯಿಂಟ್‌ಗೇ ಹಾಕಿ 30-27 ರ ಮುನ್ನಡೆ ಸಾಧಿಸಿದರು. ಈ ಆರಂಭಿಕ ಮುನ್ನಡೆಯೇ ಭಾರತಕ್ಕೆ ಗೆಲುವಿನ ದಾರಿಯನ್ನು ಸುಲಭಗೊಳಿಸಿತು.

ಈ ಫೈನಲ್ ಪಂದ್ಯ ಕೇವಲ ಚಿನ್ನದ ಪದಕಕ್ಕಷ್ಟೇ ಸೀಮಿತವಾಗಲಿಲ್ಲ, ಬದಲಿಗೆ ಇತಿಹಾಸದ ಪುಟಗಳಲ್ಲೂ ದಾಖಲಾಯಿತು. ಪಂದ್ಯದಲ್ಲಿ ಭಾರತೀಯ ಆರ್ಚರ್‌ಗಳು ದಾಖಲಿಸಿದ 238 ಅಂಕಗಳು, 2014 ರಲ್ಲಿ ದಕ್ಷಿಣ ಕೊರಿಯಾ ತಂಡ ಸ್ಥಾಪಿಸಿದ್ದ ಸುದೀರ್ಘ ಕ್ರೀಡಾ ವಿಶ್ವದಾಖಲೆಯನ್ನು ಸರಿಗಟ್ಟಿದೆ. ಭಾರತದ ಈ ಅಪ್ರತಿಮ ಗುರಿಯನ್ನು ಕಂಡು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಈ ಐತಿಹಾಸಿಕ ಸ್ವರ್ಣ ಪದಕದೊಂದಿಗೆ ಭಾರತದ ಹಿರಿಯ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಂ ತಮ್ಮ ಏಷ್ಯನ್ ಗೇಮ್ಸ್ ವೃತ್ತಿಜೀವನದ 4ನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡು ಹೊಸ ದಾಖಲೆ ಬರೆದರು. ಇನ್ನು ಅದ್ಭುತ ಪ್ರದರ್ಶನ ನೀಡಿದ ಯುವ ತಾರೆಗಳಾದ ಚಿಕಿತಾ ಮತ್ತು ಪ್ರೀತಿಕಾ ತಮ್ಮ ಚೊಚ್ಚಲ ಪಂದ್ಯದಲ್ಲೇ ಸ್ವರ್ಣ ಪದಕಕ್ಕೆ ಮುತ್ತಿಕ್ಕಿ ದೇಶದ ಮನೆಮಾತಾಗಿದ್ದಾರೆ.

ಈ ಅದ್ಭುತ ಗೆಲುವಿನೊಂದಿಗೆ ಭಾರತದ ಪ್ರಸ್ತುತ ಏಷ್ಯನ್ ಗೇಮ್ಸ್‌ನ ಒಟ್ಟು ಚಿನ್ನದ ಪದಕಗಳ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಭಾರತ 21 ಬೆಳ್ಳಿ ಮತ್ತು 25 ಕಂಚಿನ ಪದಕಗಳು ಸೇರಿದಂತೆ ಒಟ್ಟು 53 ಪದಕಗಳು ಸೇರಿವೆ. ಭಾರತೀಯ ಕ್ರೀಡಾಪಟುಗಳ ಈ ಅದ್ಭುತ ಕ್ರೀಡಾಸಾಧನೆಗೆ ದೇಶಾದ್ಯಂತ ಅಪಾರ ಮೆಚ್ಚುಗೆ ಹಾಗೂ ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿದೆ.

Must Read