ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಸಾಫ್ಟ್ ಟೆನ್ನಿಸ್ ಆಟಗಾರ ಜಯ್ ಮೀನಾ ಕಂಚಿನ ಪದಕ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಈ ಪದಕ ಒಲಿದಿದ್ದು, ಸಾಫ್ಟ್ ಟೆನ್ನಿಸ್ ಕ್ರೀಡೆಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಏಷ್ಯನ್ ಗೇಮ್ಸ್ ಪದಕ ಇದಾಗಿದೆ. ಜಯ್ ಮೀನಾ ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಸಾಮಾಜಿಕ ಜಾಲತಾಣ ‘X’ ನಲ್ಲಿ ಪ್ರಧಾನಿ ಮೋದಿ ಅವರು ಈ ಸಂತಸವನ್ನು ಹಂಚಿಕೊಂಡಿದ್ದು, “ಇದು ಭಾರತೀಯ ಸಾಫ್ಟ್ ಟೆನ್ನಿಸ್‌ಗೆ ಐತಿಹಾಸಿಕ ಕ್ಷಣ. ಪುರುಷರ ಸಿಂಗಲ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟ ಜಯ್ ಮೀನಾ ಅವರಿಗೆ ಅಭಿನಂದನೆಗಳು. ಇವರ ಈ ಸಾಧನೆ ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದು, ಮುಂದಿನ ದಿನಗಳಲ್ಲಿ ಸಾಫ್ಟ್ ಟೆನ್ನಿಸ್ ಕ್ರೀಡೆಗೆ ಬರಬಯಸುವ ಸಾವಿರಾರು ಯುವಕರಿಗೆ ದೊಡ್ಡ ಪ್ರೇರಣೆಯಾಗಲಿದೆ” ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಅದೇ ರೀತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಜಯ್ ಮೀನಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಅವರು,ʼನಿಮ್ಮ ಈ ಐತಿಹಾಸಿಕ ಪ್ರದರ್ಶನವು ಏಷ್ಯನ್ ಗೇಮ್ಸ್‌ನ ಈ ಕ್ರೀಡಾ ವಿಭಾಗದಲ್ಲಿ ಭಾರತಕ್ಕೆ ಅತ್ಯಂತ ಮೊದಲ ಪದಕವನ್ನು ತಂದುಕೊಟ್ಟಿದೆ. ಈ ಮೈಲಿಗಲ್ಲಿನ ಸಾಧನೆಯು ಯುವ ಕ್ರೀಡಾಪಟುಗಳು ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಉನ್ನತ ಗುರಿಗಳನ್ನು ತಲುಪಲು ದೊಡ್ಡ ಪ್ರೇರಣೆಯಾಗಲಿದೆ. ನೀವು ಕ್ರೀಡಾ ಲೋಕದಲ್ಲಿ ಇನ್ನಷ್ಟು ಹೆಚ್ಚಿನ ಯಶಸ್ಸನ್ನು ಸಾಧಿಸಿ, ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಹಾರೈಸುತ್ತೇವೆʼ ಎಂದಿದ್ದಾರೆ.
ಸೆಮಿಫೈನಲ್‌ನಲ್ಲಿ ರೋಚಕ ಹೋರಾಟ
ಕ್ವಾರ್ಟರ್‌ಫೈನಲ್‌ನಲ್ಲಿ ಫಿಲಿಪೈನ್ಸ್‌ನ ಶೆರ್ವಿನ್ ನುಗುಯಿಟ್ ವಿರುದ್ಧ ರೋಚಕ ಜಯ ಸಾಧಿಸಿ ಜಯ್ ಮೀನಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಸೆಮಿಫೈನಲ್ ಪ್ರವೇಶದೊಂದಿಗೆ ಭಾರತಕ್ಕೆ ಪದಕ ಖಚಿತವಾಗಿತ್ತು. ಆದರೆ, ಅಂತಿಮ ನಾಲ್ಕರ ಘಟ್ಟದಲ್ಲಿ ಜಪಾನ್‌ನ ಟಕುಯಾ ಕುರೊಸಾಕಾ ವಿರುದ್ಧ 2-4 ಸೆಟ್‌ಗಳ ಅಂತರದಲ್ಲಿ ಜಯ್ ಮೀನಾ ಹೋರಾಡಿ ಸೋಲನ್ನೊಪ್ಪಿಕೊಂಡಿದ್ದರಿಂದ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳು
ಇದೇ ವೇಳೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳು ಲಭಿಸಿವೆ. ವೇಟ್‌ಲಿಫ್ಟಿಂಗ್‌ನ 49 ಕೆಜಿ ವಿಭಾಗದಲ್ಲಿ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಇದರೊಂದಿಗೆ ಶೂಟಿಂಗ್‌ನ ಪುರುಷರ ಮತ್ತು ಮಹಿಳೆಯರ ಸ್ಕೀಟ್ ತಂಡಗಳು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿವೆ.
ಅಲ್ಲದೆ, ಮಹಿಳಾ ಹಾಕಿ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್ ವಿರುದ್ಧ 20-1 ರ ಭರ್ಜರಿ ಗೋಲುಗಳ ಅಂತರದಿಂದ ಐತಿಹಾಸಿಕ ಜಯ ದಾಖಲಿಸಿದೆ. ಸದ್ಯದ ಲಭ್ಯವಿರುವ ಮಾಹಿತಿ ಪ್ರಕಾರ, ಭಾರತ 11 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದು, ಚೀನಾ 75 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.



