Asian Games | ಓಟದಲ್ಲಿ ಬೆಳ್ಳಿಯ ಬೇಟೆಯಾಡಿದ ಭಾರತದ ಬೇನ್ಸ್, ಸೇಬಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯನ್ ಗೇಮ್ಸ್ ನಲ್ಲಿ ಹರ್ಮಿಲನ್ ಬೇನ್ಸ್ ಅವರು 800 ಮೀಟರ್​ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇಂದಿನ ಸ್ಪರ್ಧೆಯಲ್ಲಿ ಆರಂಭದಲ್ಲಿ ಹಿಂದಿದ್ದ ಬೇನ್ಸ್ 400 ಮೀಟರ್​ ಓಟದ ನಂತರ ವೇಗ ಹೆಚ್ಚಿಸಿಕೊಂಡರು. ಅಂತಿಮವಾಗಿ, ಚೀನಾದ ವಾಂಗ್ ಚುನ್ಯು ಅವರನ್ನು 2:03.75 ಸೆ ಸಮಯದಲ್ಲಿ ಹಿಂದಿಕ್ಕಿ ಎರಡನೇ ಸ್ಥಾನ ಪಡೆದರು. ಶ್ರೀಲಂಕಾದ ತರುಷಿ 2:03.20 ರಲ್ಲಿ ಚಿನ್ನ ಗೆದ್ದರು.

ಅವಿನಾಶ್ ಸೇಬಲ್ ಬೆಳ್ಳಿ ಪದಕ:
ಪುರುಷರ 5,000 ಮೀಟರ್​ ಓಟದಲ್ಲಿ ಅವಿನಾಶ್ ಸೇಬಲ್ ಬೆಳ್ಳಿ ಗೆದ್ದರು. 2023ರ ಏಷ್ಯಾಡ್​ನಲ್ಲಿ ಅವಿನಾಶ್​ಗೆ ಇದು ಎರಡನೇ ಪದಕ. ಅವಿನಾಶ್ ಸೇಬಲ್ ಪುರುಷರ 5,000 ಮೀಟರ್ ಬೆಳ್ಳಿ ಪದಕವನ್ನು 13: 21.09 ರಲ್ಲಿ ಗಳಿಸಿದರು. ಭಾರತೀಯ ಗುಲ್ವೀರ್ ಸಿಂಗ್ 13:29.93 ಸಮಯದೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಬಿರ್ಹಾನು ಬಾಲೆವ್ ಯೆಮಾತಾವ್ ಏಷ್ಯನ್ ಗೇಮ್ಸ್​ನ ದಾಖಲೆಯ ಸಮಯದೊಂದಿಗೆ 13:17.40 ಸೆ. ನೊಂದಿಗೆ ಚಿನ್ನ ಗೆದ್ದರೆ, ದಾವಿತ್ ಫಿಕಾಡು 13:25.63 ಸೆ. ನೊಂದಿಗೆ ಕಂಚಿಗೆ ತೃಪ್ತಿಪಟ್ಟರು.

3,000 ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಅವಿನಾಶ್​ ಚಿನ್ನದ ಪದಕ ಗೆದ್ದಿದ್ದರು. ಈ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಅವಿನಾಶ್ ಪಾತ್ರರಾಗಿದ್ದರು.

ಕುಸ್ತಿಯಲ್ಲಿ ಸುನೀಲ್ ಕುಮಾರ್​ಗೆ ಕಂಚು
ಗ್ರೀಕೋ-ರೋಮನ್ 87 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಸುನೀಲ್ ಕುಮಾರ್​ ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು. 24 ವರ್ಷದ ಸುನೀಲ್ ಕುಮಾರ್​ ಕಿರ್ಗಿಸ್ತಾನ್‌ನ ಅಟಾಬೆಕ್ ಅಜಿಸ್ಬೆಕೊವ್ ವಿರುದ್ಧ 2-1 ಅಂತರದಲ್ಲಿ ಗೆದ್ದು ಕಂಚು ತಮ್ಮದಾಗಿಸಿಕೊಂಡರು. ನೀರಜ್, ಜ್ಞಾನೇಂದರ್ ಮತ್ತು ವಿಕಾಸ್ ಏಷ್ಯನ್ ಗೇಮ್ಸ್‌ನ ಗ್ರೀಕೋ-ರೋಮನ್ ಕುಸ್ತಿಯಲ್ಲಿ ಇಂದು ತಮ್ಮ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!