ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಕ್ರೀಡಾಕೂಟದ ಮಹಿಳೆಯರ 100 ಮೀಟರ್ ಹರ್ಡಲ್ಸ್ ಓಟದಲ್ಲಿ ಜ್ಯೋತಿ ಯರ್ರಾಜಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಈ ಸ್ಪರ್ಧೆಯಲ್ಲಿ ಚೀನಾ ಓಟಗಾರ್ತಿ ಆರಂಭದಲ್ಲೇ ತಪ್ಪೆಸೆಗಿದ್ದರು. ಗನ್ ಶಾಟ್ಗೂ (ಪ್ರಾರಂಭಿಕ ಗುಂಡು) ಮುನ್ನ ಚೀನಾದ ರೇಸರ್ ಯಾನಿ ವು ಓಟವನ್ನು ಪ್ರಾರಂಭಿಸಿದ್ದರು. ಇದರ ಬೆನ್ನಲ್ಲೇ ಭಾರತದ ಜ್ಯೋತಿ ಯರ್ರಾಜಿ ಕೂಡ ಓಡಲು ಮುಂದಾದರು.
ಅಥ್ಲೆಟಿಕ್ಸ್‌ನಲ್ಲಿ ಇದನ್ನು ತಪ್ಪು ಆರಂಭ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ ಗನ್ ಶಾಟ್ಗೂ ಮುನ್ನ ಓಡಿದ ಕ್ರೀಡಾಪಟುಗಳನ್ನು ರೇಸ್ನಿಂದ ಹೊರಹಾಕಲಾಗುತ್ತದೆ. ಹೀಗಾಗಿ ತಕ್ಷಣವೇ ಇಬ್ಬರೂ ರೇಸರ್‌ಗಳನ್ನು ಅನರ್ಹಗೊಳಿಸಿದರು. ಪಂದ್ಯದ ಅಧಿಕಾರಿಗಳು ವಿಡಿಯೋ ಪರಿಶೀಲಿಸಿದಾಗ ಚೀನಾ ಓಟಗಾರ್ತಿ ಯಾನಿ ವು ಮೊದಲು ಓಡಲು ಪ್ರಾರಂಭಿಸಿದ್ದರು ಎಂಬುದು ಸ್ಪಷ್ಟವಾಯಿತು.
ಅಥ್ಲೆಟಿಕ್ಸ್ ನಿಯಮಗಳ ಪ್ರಕಾರ, ಚೀನಾದ ಓಟಗಾರ್ತಿಯನ್ನು ಹೊರಹಾಕಬೇಕಾಗಿತ್ತು. ಆದರೆ ಅಧಿಕಾರಿಗಳು ಇಬ್ಬರನ್ನೂ ಮತ್ತೆ ರೇಸ್‌ಗೆ ಸೇರಿಸಿಕೊಂಡರು.
ಅಲ್ಲದೆ ಓಟದ ಅಂತ್ಯದ ನಂತರ ನಿರ್ಧಾರವನ್ನು ಮರು ಪರಿಶೀಲಿಸುವುದಾಗಿ ಚೀನಾ ಅಧಿಕಾರಿಗಳು ತಿಳಿಸಿದ್ದರು. ಓಟ ಮುಗಿದ ನಂತರ ಚೀನಾದ ಯುವಿ ಲಿನ್ ಪ್ರಥಮ ಸ್ಥಾನ ಪಡೆದರೆ, ಯಾನಿ ವು ದ್ವಿತೀಯ ಸ್ಥಾನ ಹಾಗೂ ಜ್ಯೋತಿ ತೃತೀಯ ಸ್ಥಾನ ಪಡೆದರು.
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ಅಥ್ಲೀಟ್ ಆಯೋಗದ ಮುಖ್ಯಸ್ಥೆ ಅಂಜು ಬಾಬಿ ಜಾರ್ಜ್ ಇದೇ ವೇಳೆ ಸ್ಥಳದಲ್ಲಿ ಹಾಜರಿದ್ದರು. ಅಲ್ಲದೆ, ಭಾರತದ ಪರವಾಗಿ ಅಧಿಕಾರಿಗಳೊಂದಿಗೆ ವಾದಿಸಿದರು. ಇದೇ ವೇಳೆ ವಿಡಿಯೋ ಮರು ಪರಿಶೀಲಿಸಿದಾಗ ಯಾನಿ ವು ಮೊದಲೇ ಓಡುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ದ್ವಿತೀಯ ಸ್ಥಾನ ಪಡೆದಿದ್ದ ಚೀನಾ ಓಟಗಾರ್ತಿ ಅನರ್ಹಗೊಂಡರು.
ಇತ್ತ ಮೂರನೇ ಸ್ಥಾನ ಪಡೆದಿದ್ದ ಭಾರತೀಯ ಓಟಗಾರ್ತಿ ಜ್ಯೋತಿ ಅವರನ್ನು ಎರಡನೇ ಸ್ಥಾನಕ್ಕೆ ಪರಿಗಣಿಸಲಾಯಿತು. ಈ ಮೂಲಕ ಜ್ಯೋತಿ ಯರ್ರಾಜಿ ಬೆಳ್ಳಿ ಪದಕ ಪಡೆದರು.