October 1, 2026
Thursday, October 1, 2026
spot_img

ಏಷ್ಯನ್ ಗೇಮ್ಸ್ ಟಿ20: ಬಾಂಗ್ಲಾದೇಶಕ್ಕೆ ಬಿಗ್ ಶಾಕ್ ನೀಡಿದ ಪಾಕಿಸ್ತಾನ್, ಫೈನಲ್‌ಗೆ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಏಷ್ಯನ್ ಗೇಮ್ಸ್ ಟಿ20 ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಅದ್ಭುತ ಗೆಲುವಿನೊಂದಿಗೆ ಪಾಕ್ ಪಡೆ ಫೈನಲ್ ಪ್ರವೇಶಿಸಿದ್ದು, ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ.

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ, ಪಂದ್ಯವನ್ನು ತಲಾ 13 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಪಾಕಿಸ್ತಾನ್ ನಾಯಕ ಸಾಹಿಬ್‌ಝಾದ ಫರ್ಹಾನ್, ಹವಾಮಾನದ ಲಾಭ ಪಡೆಯಲು ಮೊದಲು ಬೌಲಿಂಗ್ ಆಯ್ದುಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಪಾಕ್ ಬೌಲರ್‌ಗಳ ದಾಳಿಗೆ ಬೆದರಿದ ಬಾಂಗ್ಲಾ ಟಾಪ್ ಆರ್ಡರ್ ಬ್ಯಾಟರ್‌ಗಳು ಬೇಗನೇ ವಿಕೆಟ್ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌‌ಗೆ ಬಂದ ತೌಹಿದ್ ತಂಡಕ್ಕೆ ಆಸರೆಯಾದರು. ಎದುರಾಳಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ತೌಹಿದ್, ಕೇವಲ 25 ಎಸೆತಗಳಲ್ಲಿ 42 ರನ್ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅವರ ಈ ಸೂಪರ್ ಆಟದ ನೆರವಿನಿಂದ ಬಾಂಗ್ಲಾದೇಶ ನಿಗದಿತ 13 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 111 ರನ್‌ಗಳ ಮೊತ್ತ ಕಲೆಹಾಕಿತು.

13 ಓವರ್‌ಗಳಲ್ಲಿ 112 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್‌ಗೆ ಆರಂಭದಲ್ಲೇ ಆಘಾತ ಕಾದಿತ್ತು. ನಾಯಕ ಸಾಹಿಬ್‌ಝಾದ ಫರ್ಹಾನ್ (1) ಮೊದಲ ಓವರ್‌ನಲ್ಲೇ ಪೆವಿಲಿಯನ್ ಹಾದಿ ಹಿಡಿದರು. ಅವರ ಬೆನ್ನಲ್ಲೇ ಮಾಝ್ ಸದಾಕತ್ (15) ಹಾಗೂ ಉಸ್ಮಾನ್ ಖಾನ್ (14) ಕೂಡ ಬೇಗನೇ ಔಟಾಗುವುದರೊಂದಿಗೆ ಪಾಕ್ ಪಡೆ ಸಂಕಷ್ಟಕ್ಕೆ ಸಿಲುಕಿತು.

ಈ ಒತ್ತಡದ ಸಮಯದಲ್ಲಿ ಕ್ರೀಸ್‌ಗೆ ಬಂದ ಸೈಮ್ ಅಯ್ಯೂಬ್ ಭರವಸೆಯ ಆಟವಾಡಿದರು. ಕೇವಲ 12 ಎಸೆತಗಳಲ್ಲಿ 21 ರನ್ ಬಾರಿಸಿದ ಸೈಮ್, ತಂಡದ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿದರು.

ಸೈಮ್ ಔಟಾದ ನಂತರ ಜೊತೆಯಾದ ಅಬ್ದುಲ್ ಸಮದ್ ಹಾಗೂ ಹಸನ್ ನವಾಝ್ ಬಾಂಗ್ಲಾ ಬೌಲರ್‌ಗಳ ಮೇಲೆ ಸವಾರಿನಡೆಸಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್-ಬೌಂಡರಿಗಳ ಸುರಿಮಳೆ ಗೈದ ಈ ಜೋಡಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು.

ಕೊನೆಯ 4 ಓವರ್‌ಗಳಲ್ಲಿ ಪಾಕಿಸ್ತಾನ್ ಗೆಲುವಿಗೆ 36 ರನ್‌ಗಳ ಅಗತ್ಯವಿತ್ತು. ಈ ಹಂತದಲ್ಲಿ ಬಾಂಗ್ಲಾದೇಶದ ಅನುಭವಿ ವೇಗಿ ಮುಸ್ತಫಿಝುರ್ ರೆಹಮಾನ್ ಬೌಲಿಂಗ್ ಮಾಡಲು ಬಂದರು. ಆದರೆ, ಪಾಕ್ ಬ್ಯಾಟರ್‌ಗಳು ಮುಸ್ತಫಿಝುರ್ ಓವರ್‌ನಲ್ಲಿ ಬರೋಬ್ಬರಿ 23 ರನ್ ಬಾರಿಸಿದರು.

ಕೊನೆಯ 3 ಓವರ್‌ಗಳಲ್ಲಿ ಕೇವಲ 12 ರನ್‌ಗಳ ಸರಳ ಗುರಿ ಪಡೆದ ಪಾಕಿಸ್ತಾನ್, ಇನ್ನು 9 ಎಸೆತಗಳು ಬಾಕಿ ಇರುವಂತೆಯೇ ಅಂದರೆ 11.3 ಓವರ್‌ಗಳಲ್ಲಿ 112 ರನ್ ಬಾರಿಸಿ ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಟೂರ್ನಿಯಿಂದ ಬಾಂಗ್ಲಾದೇಶವನ್ನು ಹೊರಬೀಳಿಸಿ, ಫೈನಲ್‌ಗೆ ಲಗ್ಗೆಯಿಟ್ಟಿದೆ.

Must Read