October 20, 2026
Tuesday, October 20, 2026
spot_img

ಏಷ್ಯನ್ ಪ್ಯಾರಾ ಗೇಮ್ಸ್: 200 ಮೀಟರ್ ಓಟದಲ್ಲಿ ಭಾರತದ ಪ್ರೀತಿ ಪಾಲ್‌ಗೆ ಬೆಳ್ಳಿ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 5ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್ ಪ್ರೀತಿ ಪಾಲ್ ಅದ್ಭುತ ಸಾಧನೆ ಮಾಡಿದ್ದಾರೆ. ಮಂಗಳವಾರ ನಡೆದ ಮಹಿಳೆಯರ 200 ಮೀಟರ್ ಟಿ35 ಓಟದ ಸ್ಪರ್ಧೆಯಲ್ಲಿ ಮಿಂಚಿನ ವೇಗ ಪ್ರದರ್ಶಿಸಿದ ಪ್ರೀತಿ, 29.53 ಸೆಕೆಂಡುಗಳಲ್ಲಿ ಗುರಿ ತಲುಪಿ ದೇಶಕ್ಕೆ ಬೆಳ್ಳಿಯ ಪದಕ ತಂದುಕೊಟ್ಟಿದ್ದಾರೆ. ಈ ವಿಭಾಗದಲ್ಲಿ ಚೀನಾದ ಝೌ ಕ್ಸಿಯಾ 28.03 ಸೆಕೆಂಡುಗಳಲ್ಲಿಯೇ ಗುರಿ ಮುಟ್ಟುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.

ಪ್ರೀತಿ ಪಾಲ್ ಅವರಿಗೆ ಈ ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಬಾರಿಯ ಜಯ ಅತ್ಯಂತ ವಿಶೇಷವಾದುದಾಗಿದೆ. 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅವರು 32.19 ಸೆಕೆಂಡುಗಳೊಂದಿಗೆ 4ನೇ ಸ್ಥಾನ ಪಡೆದು ಪದಕ ವಂಚಿತರಾಗಿದ್ದರು. ಆದರೆ ಈ ಬಾರಿ ಕಠಿಣ ಶ್ರಮದ ಮೂಲಕ ತಮ್ಮ ಸಮಯವನ್ನು 2.66 ಸೆಕೆಂಡುಗಳಷ್ಟು ಸುಧಾರಿಸಿಕೊಂಡು ನೇರವಾಗಿ ರನ್ನರ್-ಅಪ್ ಸ್ಥಾನಕ್ಕೇರಿದ್ದಾರೆ.

ಟ್ರ್ಯಾಕ್ ಮತ್ತು ಈಜು ಸ್ಪರ್ಧೆಯಲ್ಲೂ ಪದಕಗಳ ಸುರಿಮಳೆ

ಮಹಿಳೆಯರ ಟಿ12 ವಿಭಾಗದ ಓಟದಲ್ಲಿ ಭಾರತದಸಿಮ್ರಾನ್ ಶರ್ಮಾ 24.80 ಸೆಕೆಂಡುಗಳಲ್ಲಿ ಓಡಿ ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಇದೇ ಓಟದಲ್ಲಿ ಭಾರತದ ತೇಜಲ್ಬೆನ್ ದಾಮೋರ್ (25.23 ಸೆಕೆಂಡು) ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.

ಈಜು ಅಂಗಳದಲ್ಲೂ ಭಾರತದ ಕೀರ್ತಿ ಪಾತಕೆ ಹಾರಿದ್ದು, ಪುರುಷರ SM7 ವಿಭಾಗದ 200 ಮೀಟರ್ ಇಂಡಿವಿಜುವಲ್ ಮೆಡ್ಲಿಯಲ್ಲಿ ಭಾರತದ ಪ್ಯಾರಾ ಈಜುಗಾರ ನಿರಂಜನ್ ಮುಕುಂದನ್ ಕಂಚಿನ ಪದಕ ಜಯಿಸಿದ್ದಾರೆ.

ಇದನ್ನೂ ಓದಿ:

ಭಾರತದ ಒಟ್ಟು ಪದಕಗಳು 30ಕ್ಕೆ ಏರಿಕೆ

ಭಾರತದ ಪ್ಯಾರಾ ಅಥ್ಲೀಟ್‌ಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಸತತವಾಗಿ ಪದಕಗಳನ್ನು ಗೆಲ್ಲುತ್ತಾ ಮುನ್ನಡೆದಿದ್ದಾರೆ. ಸದ್ಯದ ವರದಿಗಳ ಪ್ರಕಾರ ಭಾರತದ ಒಟ್ಟು ಪದಕಗಳ ಪಟ್ಟಿ 30 ಕ್ಕೆ ತಲುಪಿದ್ದು, ಇದರಲ್ಲಿ 7 ಚಿನ್ನ, 10 ಬೆಳ್ಳಿ ಹಾಗೂ 13 ಕಂಚಿನ ಪದಕಗಳು ಸೇರಿವೆ.

Must Read