October 15, 2026
Thursday, October 15, 2026
spot_img

ಕಾರವಾರ ಬಂದರಿನಲ್ಲಿ ಡಾಂಬರು ಸೋರಿಕೆ: ಸಾವಿರಾರು ಟನ್ ಬಿಸಿ ಡಾಂಬರು ಸಮುದ್ರ ಪಾಲು

ಹೊಸದಿಗಂತ ವರದಿ ಕಾರವಾರ:

ಇಲ್ಲಿನ ಬೈತಕೋಲದಲ್ಲಿರುವ ವಾಣಿಜ್ಯ ಬಂದರಿಗೆ ಆಗಮಿಸಿದ್ದ ಡಾಂಬರು ತುಂಬಿರುವ ಹಡಗಿನಿಂದ ಅಪಾರ ಪ್ರಮಾಣದಲ್ಲಿ ಬಿಸಿ ಡಾಂಬರು ಉಕ್ಕಿ ಸಮುದ್ರ ಸೇರಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಶನಿವಾರ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಸ್ಥಳೀಯ ಜನರಿಂದ ಘಟನೆಯ ಕುರಿತಂತೆ ಮಾಹಿತಿ ಬಯಲಾಗಿದೆ. ಸುಮಾರು 5 ಸಾವಿರ ಟನ್ ಡಾಂಬರು ಹೊತ್ತು ತಂದಿದ್ದ ಹಡಗಿನಿಂದ ಸಾವಿರಾರು ಟನ್ ಬಿಸಿ ಡಾಂಬರು ಕಡಲು ಸೇರಿದ್ದು ಹಡಗಿನಿಂದ ಜಲಧಾರೆಯಂತೆ ಡಾಂಬರು ಸಮುದ್ರ ಸೇರುತ್ತಿರುವದು ಕಂಡು ಬಂದಿದೆ.

ಅಪಾರ ಪ್ರಮಾಣದಲ್ಲಿ ಡಾಂಬರು ಸೋರಿಕೆಯಿಂದ ಸುತ್ತ ಮುತ್ತಲಿನ ಕಡಲ ವ್ಯಾಪ್ತಿಯಲ್ಲಿ ಮಾಲಿನ್ಯ ಉಂಟಾಗಲಿದ್ದು ಜಲಚರಗಳ ಮೇಲೆ ಪರಿಣಾಮ ಬೀರಲಿದೆ, ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆ ಆಗಲಿದೆ ಎಂಬ ಆತಂಕ ಸ್ಥಳೀಯರಿಂದ ವ್ಯಕ್ತವಾಗಿದೆ.

ಬಂದರು ಇಲಾಖೆ ಮತ್ತು ಸಂಬಂಧಿಸಿದ ಇಲಾಖೆಗಳು ಘಟನೆಯ ಕುರಿತಂತೆ ತನಿಖೆ ನಡೆಸಿ ಸ್ಪಷ್ಟ ಮಾಹಿತಿ ನೀಡಬೇಕು ಮತ್ತು ಬಿಸಿ ಡಾಂಬರು ಸೋರಿಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಂತೆ ಅಧ್ಯಯನ ನಡೆಸಬೇಕು ಎಂಬ ಒತ್ತಾಯ ಸುತ್ತ ಮುತ್ತಲಿನ ನಿವಾಸಿಗಳಿಂದ ಕೇಳಿ ಬಂದಿದೆ.

Must Read