August 23, 2026
Sunday, August 23, 2026
spot_img

ವಿಶ್ವದ ಮೊದಲ ಐವಿಎಫ್ ʼಲಖಿಮಿʼ ಹೆಣ್ಣು ಕರು ಜನನ: ಅಸ್ಸಾಂ ಪಶುಸಂಗೋಪನಾ ಇಲಾಖೆಯ ಸಾಧನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಸ್ಸಾಂನ ಪಶುಸಂಗೋಪನಾ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದು ಸೃಷ್ಟಿಯಾಗಿದೆ. ರಾಜ್ಯದ ಹೆಮ್ಮೆಯ ಸ್ಥಳೀಯ ದನಕರುಗಳ ತಳಿಯಾದ ‘ಲಖಿಮಿ’ ತಳಿಯ ಮೊದಲ ಹೆಣ್ಣು ಕರುವು ಐವಿಎಫ್ ತಂತ್ರಜ್ಞಾನದ ಮೂಲಕ ಜನಿಸಿದೆ. ವಿಶ್ವದಲ್ಲೇ ಲಖಿಮಿ ತಳಿಯಲ್ಲಿ ಐವಿಎಫ್ ಮೂಲಕ ಕರು ಜನಿಸಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಈ ಐತಿಹಾಸಿಕ ಸಾಧನೆ ನಡೆದಿದ್ದು, ದೇಶಿ ತಳಿಗಳ ಸಂರಕ್ಷಣೆ ಮತ್ತು ಹೈನುಗಾರಿಕೆ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.

‘X’ನಲ್ಲಿ ಮಾಹಿತಿ ಹಂಚಿಕೊಂಡ ಸಿಎಂ


ಈ ಮಹತ್ವದ ಸುದ್ದಿಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಸಾಮಾಜಿಕ ಜಾಲತಾಣವಾದ ‘X’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಾಧನೆಯನ್ನು ಅವರು ಸಭ್ಯತೆ, ಸಂಸ್ಕೃತಿ ಮತ್ತು ಸೃಜನಶೀಲತೆಯ ಸುಂದರ ಸಂಗಮ ಎಂದು ಬಣ್ಣಿಸಿದ್ದಾರೆ.

ʼವಿಶ್ವದ ಮೊದಲ ಐವಿಎಫ್ ಲಖಿಮಿ ಹೆಣ್ಣು ಕರು ಜನಿಸಿದೆ. ಈ ಐತಿಹಾಸಿಕ ಸಾಧನೆಯು ನಮ್ಮ ಜಾನುವಾರು ಮತ್ತು ಡೈರಿ ವಲಯಕ್ಕೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ. ಇದು ಸ್ಥಳೀಯ ತಳಿಗಳನ್ನು ರಕ್ಷಿಸುವುದಲ್ಲದೆ, ರೋಗ ನಿಯಂತ್ರಣವನ್ನು ಸುಧಾರಿಸುತ್ತದೆ. ಇದರಿಂದ ಹಾಲಿನ ಉತ್ಪಾದನೆ ಹೆಚ್ಚಿ, ಅಂತಿಮವಾಗಿ ನಮ್ಮ ರೈತರ ಆದಾಯವನ್ನು ಹೆಚ್ಚಿಸಲು ನೆರವಾಗುತ್ತದೆʼ ಎಂದು ಸಿಎಂ ಹಿಮಂತ ಬಿಸ್ವ ಶರ್ಮಾ ಬರೆದಿದ್ದಾರೆ. ಅಲ್ಲದೆ, ಈ ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿಗಳು ಮತ್ತು ಪಶುವೈದ್ಯಕೀಯ ವೃತ್ತಿಪರರನ್ನು ಅವರು ಅಭಿನಂದಿಸಿದ್ದಾರೆ.

ಇದನ್ನೂ ಓದಿ:

ಲಖಿಮಿ ತಳಿಯ ಮಹತ್ವ

ಲಖಿಮಿ ಹಸುಗಳು ಅಸ್ಸಾಂನ ಸ್ಥಳೀಯ ತಳಿಯಾಗಿದ್ದು, ರಾಜ್ಯದ ಪ್ರಮುಖ ಜಾನುವಾರು ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ವಿಶಿಷ್ಟ ಮತ್ತು ರೋಗನಿರೋಧಕ ಶಕ್ತಿ ಹೊಂದಿರುವ ದೇಶಿ ತಳಿಗಳನ್ನು ಉಳಿಸಿಕೊಳ್ಳಲು ವಿಜ್ಞಾನಿಗಳು ಐವಿಎಫ್‌ನಂತಹ ಸುಧಾರಿತ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಇದರಿಂದ ಉತ್ತಮ ಗುಣಲಕ್ಷಣಗಳನ್ನು ಹೊಂದಿರುವ ಹಸುಗಳ ಸಂಖ್ಯೆಯನ್ನು ವೇಗವಾಗಿ ಹೆಚ್ಚಿಸಲು ಸಾಧ್ಯವಾಗುತ್ತದೆ.

ಈ ಕರು ಚಿಕ್ಕದಾಗಿರಬಹುದು, ಆದರೆ ಇದು ನಮ್ಮ ರಾಜ್ಯದ ಜೈವಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಒಂದು ದೊಡ್ಡ ಹೊತ್ತು ತಂದಿದ್ದಾಳೆ ಎಂದು ಮುಖ್ಯಮಂತ್ರಿಗಳು ಹೆಮ್ಮೆಯಿಂದ ಹೇಳಿದ್ದಾರೆ. ಈ ಯಶಸ್ಸು ಮುಂಬರುವ ದಿನಗಳಲ್ಲಿ ಭಾರತದ ದೇಶಿ ತಳಿಗಳ ತಳಿವಿಜ್ಞಾನ ಬೆಳವಣಿಗೆಗೆ ದಾರಿದೀಪವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !