Sunday, December 3, 2023

Latest Posts

14 ವರ್ಷ ಹಿಂದೆ ಚುನಾವಣಾಧಿಕಾರಿಗೆ ಹಲ್ಲೆ: ಮಂಜೇಶ್ವರ ಶಾಸಕ ಅಶ್ರಫ್‌ಗೆ 1 ವರ್ಷ ಜೈಲು ಶಿಕ್ಷೆ, ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಹದಿನಾಲ್ಕು ವರ್ಷಗಳ ಹಿಂದೆ ಚುನಾವಣಾ ಅಧಿಕಾರಿಯಾಗಿದ್ದ ಉಪತಹಶೀಲ್ದಾರ್ ದಾಮೋದರನ್ ಎಂಬವರಿಗೆ ಹಲ್ಲೆ ನಡೆಸಿದ್ದ ಆರೋಪದಲ್ಲಿ, ಮಂಜೇಶ್ವರ ಶಾಸಕ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂಲೀಗಿನ ನಾಯಕ ಎ.ಕೆ.ಎಂ.ಅಶ್ರಫ್‌ಗೆ ಕಾಸರಗೋಡಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಒಂದು ಒಂದು ವರ್ಷ ಜೈಲು ಶಿಕ್ಷೆ ತೀರ್ಪು ಪ್ರಕಟಿಸಿದೆ. ಅಲ್ಲದೆ 10 ಸಾವಿರ ರೂ.ಗಳ ದಂಡವನ್ನೂ ವಿಧಿಸಿ ಮಂಗಳವಾರ ತೀರ್ಪಿತ್ತಿದೆ.

ಆದಾಗ್ಯೂ ಅಶ್ರಫ್ ಅವರು, ತನಗೆ ನ್ಯಾಯಾಲಯದಿಂದ ಜಾಮೀನು ಲಭಿಸಿದೆ . “ಸಾಕ್ಷಿ ಅಥವಾ ದಾಖಲೆ ಇಲ್ಲದೆಯೇ ನೀಡಲಾದ ಈ ವಿಚಿತ್ರ ತೀರ್ಪು”ವಿರುದ್ಧ ತಾನು ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

2010ರ ಜನವರಿಯಲ್ಲಿ, ಅಶ್ರಫ್ ಕಾಸರಗೋಡು ಜಿಲ್ಲಾ ಪಂಚಾಯತ್ ಮಂಡಳಿಯ ಸದಸ್ಯನಾಗಿದ್ದ ವೇಳೆ ನಡೆದಿದ್ದ ಘಟನೆ ಇದಾಗಿದೆ.ಮತದಾರರ ಹೆಸರನ್ನು ಪಟ್ಟಿಗೆ ಸೇರ್ಪಡೆಗೊಳಿಸುವ ಜವಾಬ್ದಾರಿ ಹೊಂದಿದ್ದ ಅಂದಿನ ಚುನಾವಣಾ ಅಧಿಕಾರಿಯಾಗಿದ್ದ ಉಪತಹಶೀಲ್ದಾರ್ ಎ.ದಾಮೋದರನ್ ಅವರು ಮೈಸೂರಿನಲ್ಲಿ ವಾಸಿಸುತ್ತಿದ್ದ ಬಂಗ್ರ ಮಂಜೇಶ್ವರ ನಿವಾಸಿ ಮುನವರ್ ಇಸ್ಮಾಯಿಲ್ ಎಂಬವರ ಅರ್ಜಿಯನ್ನು ತಿರಸ್ಕರಿಸಿದ್ದರು.

ಮೈಸೂರಿನಲ್ಲಿನ ಮತದಾರ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆದುಹಾಕಿರುವುದಕ್ಕೆ ದಾಖಲೆ ನೀಡದೆ ಅರ್ಜಿಯನ್ನು ಪುರಸ್ಕರಿಸಲಾಗದೆಂದು ಕಾನೂನು ನಿಯಮವನ್ನು ಹೇಳಿದ್ದರು. ಆದರೆ ಅಶ್ರಫ್ , ಪಂಚಾಯತ್ ಸದಸ್ಯ ಅಬ್ದುಲ್ಲಾ ತಾಜಾ ಹಾಗೂ ಬಶೀರ್ ಕನಿಲ ಅವರು ಮಂಜೇಶ್ವರ ಬ್ಲಾಕ್ ಪಂಚಾಯತ್ ಕಚೇರಿಗೆ ತೆರಳಿ ಅಲ್ಲಿದ್ದ ಉಪತಹಶೀಲ್ದಾರ್ ದಾಮೋದರನ್ ಅವರಿಗೆ ಥಳಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿತ್ತು.ಆದರೆ ತಾನು ಅರ್ಜಿಯನ್ನು “ಏಕಪಕ್ಷೀಯ”ವಾಗಿ ತಿರಸ್ಕರಿಸಿದ ಬಗ್ಗೆ ಪ್ರಶ್ನಿಸಿದ್ದು ಮಾತ್ರ ಎಂದು ಅಶ್ರಫ್ ಹೇಳಿದ್ದರು.
ಆದರೆ ಚುನಾವಣಾ ಮತದಾರಪಟ್ಟಿ ರಚನೆಯ ಹೊಣೆ ಹೊತ್ತಿದ್ದ ಉಪತಹಶೀಲ್ದಾರ್ ಅವರ ದೂರಿನಂತೆ, ಅಶ್ರಫ್ ವಿರುದ್ಧ ಭಾರತೀಯ ದಂಡಸಂಹಿತೆ ಯ ಸೆಕ್ಷನ್ 323 ಮತ್ತು 353 ನೇ ವಿಯಡಿ, ಸಾರ್ವಜನಿಕ ಸೇವಕರೊಬ್ಬರಿಗೆ ಕರ್ತವ್ಯಕ್ಕೆ ತಡೆ ಒಡ್ಡಲು ಹಲ್ಲೆ ಅಥವಾ ಕ್ರಿಮಿನಲ್ ಬಲವಂತದ ಬಳಕೆ ಮೂಲಕ ಘಾಸಿ ಉಂಟು ಮಾಡಿದ್ದ ಆರೋಪ ದಾಖಲಿಸಲಾಗಿತ್ತು.ಅಲ್ಲದೆ ಸೆಕ್ಷನ್ 141ರಡಿ ಕಾನೂನು ಬಾಹಿರವಾಗಿ ಜಮಾಯಿಸಿದ ಆರೋಪವೂ ದಾಖಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟ್ , ಸೆಕ್ಷನ್ 323ರಡಿ ಮಾತ್ರ ಅಶ್ರಫ್ ಅವರನ್ನು ತಪ್ಪೆಸಗಿದ್ದಾಗಿ ಗುರುತಿಸಿತು. ಇದಕ್ಕೆ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆ ವಿಸಲು ಅವಕಾಶವಿದೆ.2 ವರ್ಷ ಶಿಕ್ಷೆಯ ಅವಕಾಶವಿದ್ದ ಐಪಿಸಿ ಸೆಕ್ಷನ್ 353ರಿಂದ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಸೆಕ್ಷನ್‌ನಡಿ ಶಿಕ್ಷೆಯಾದರೆ ಸ್ವಯಂ ಆಗಿ ಜನಪ್ರಾತಿನಿಧ್ಯ ಕಾಯ್ದೆಯಡಿ ತಕ್ಷಣದಿಂದಲೇ ವಿಧಾನಸಭಾ ಸದಸ್ಯತ್ವ ಕಳೆದುಕೊಳ್ಳಬೇಕಾಗಿ ಬರುತ್ತಿತ್ತು.

“ತೀರ್ಪಿನ ಬಗ್ಗೆ ನನಗೆ ದುಃಖವಾಗಿದೆ.ಅಧಿಕಾರಿಗೆ ಹೊಡೆದ ಆರೋಪಕ್ಕಾಗಿ ನನಗೆ ಗರಿಷ್ಠ ಶಿಕ್ಷೆ ನೀಡಲಾಗಿದೆ. ಅಂತಹ ಅಪರಾಧ ನಾನು ಎಸಗಿಲ್ಲ. ಅದಕ್ಕೆ ಸಾಕ್ಷ್ಯ ಇಲ್ಲ” ಎಂದು ಅಶ್ರಫ್ ಪ್ರತಿಕ್ರಿಯಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!