ಸ್ಥಳ ಮಹಜರ್ ವೇಳೆ ಮಹಿಳಾ ಪಿಎಸ್ಐ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು

ಹೊಸದಿಗಂತ ವರದಿ,ಕಲಬುರಗಿ:

ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ ಕೊಲೆಯ ಪ್ರಕರಣದ ಪ್ರಮುಖ ಆರೋಪಿ ವಿಜಯ ಹಳ್ಳಿ ಮೇಲೆ ಶನಿವಾರ ಬೆಳ್ಳಂಬೆಳಿಗ್ಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಶಹಬಾದ್ ಪಟ್ಟಣದ ಹೊರವಲಯದಲ್ಲಿ ಫೈರಿಂಗ್ ಮಾಡಲಾಗಿದ್ದು, ವಿಜಯ ಹಳ್ಳಿ ಬಲಗಾಲಿಗೆ ಗುಂಡು ತಗುಲಿದೆ. ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಘಟನೆಯಲ್ಲಿ‌ ಪಿಎಸ್ಐ ಸುವರ್ಣಾ ಅವರಿಗೆ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಯ ಐಸಿಯು,ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಹಿನ್ನೆಲೆ

ಜುಲೈ 11 ರಂದು ಶಹಬಾದ್ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ ಕೊಲೆಯಾಗಿತ್ತು. ಕೊಲೆಯ ಆರೋಪದ ಹಿನ್ನಲೆ‌ ಶುಕ್ರವಾರ ವಿಜಯ ಹಳ್ಳಿ ಎಂಬಾತನನ್ನು ಬಂಧಿಸಿದ ಪೊಲೀಸರು, ಶನಿವಾರ ಬೆಳಗ್ಗೆ 7-30 ರ ಸುಮಾರಿಗೆ ಕೊಲೆಗೆ ಬಳಸಿದ ಮಾರಕಾಸ್ತ್ರವೊಂದು ಬಿಸಾಡಿದ ಸ್ಥಳ ಮಹಜರ್ ಮಾಡಲು ಆರೋಪಿಯನ್ನು ಕರೆದೊಯ್ದಿದ್ದರು.

ತಾನು ಬಿಸಾಡಿದ ಮಚ್ಚು ತೋರಿಸಿದ ಆರೋಪಿ ವಿಜಯ, ಅದೇ ಮಚ್ಚಿನಿಂದ ಪಿಎಸ್ಐ ಸುವರ್ಣಾ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನಿಖಾಧಿಕಾರಿ ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ ಗಾಳಿಯಲ್ಲಿ ಒಂದು ಸೂತ್ತು ಗುಂಡುಹಾರಿಸಿ ಶರಣಾಗುವಂತೆ ಹೇಳಿದ್ದಾರೆ. ಆದರೂ ವಿಜಯ್ ಹಳ್ಳಿ ತಪ್ಪಿಸಿಕೊಳ್ಳಲು ಯತ್ನ ಮುಂದುವರೆಸಿದಾಗ, ಆರೋಪಿ ಬಲಗಾಲಿಗೆ ಒಂದು ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೂ, ಎರಡು ವರ್ಷದ ಹಿಂದೆ ಗಿರೀಶ ಕಂಬಾನೂರ ಅಣ್ಣನಾದ ಸತೀಶ ಕೊಲೆ ಸಹ ಇದೆ ಆರೋಪಿ ವಿಜಯ ಹಳ್ಳಿ ಮಾಡಿದ್ದ, ಕೊಲೆಯ ನಂತರ ಜೈಲಿನಿಂದಲೇ ಕಂಬಾನೂರ ಕುಟುಂಬಕ್ಕೆ ಬೇದರಿಕೆ ಹಾಕುವುದು ಸೇರಿದಂತೆ ಈತನ ವಿರುದ್ದ ಒಟ್ಟು ಆರು ಪ್ರಕರಣಗಳು ದಾಖಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!