ವಿಧಾನಸಭಾ ಚುನಾವಣೆ 2023: ಛತ್ತೀಸ್‌ಗಢ, ಮಧ್ಯಪ್ರದೇಶದಲ್ಲಿ ಮತದಾನ ಪ್ರಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಇಂದು ಮಧ್ಯಪ್ರದೇಶದ ಎಲ್ಲ 230 ಕ್ಷೇತ್ರಗಳಿಗೆ ಒಂದೇ ಹಂತದ ಹಾಗೂ ಛತ್ತೀಸ್​ಗಢದ 70 ಕ್ಷೇತ್ರಗಳಿಗೆ ಅಂತಿಮ ಹಂತದ ಮತದಾನ ಪ್ರಕ್ರಿಯೆ ಇಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಂಡಿದೆ. ಸಂಜೆ 6ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ, ಬಹುತೇಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿದೆ.

ಛತ್ತೀಸ್​ಗಢದ 22 ಜಿಲ್ಲೆಗಳ 70 ವಿಧಾನಸಭಾ ಸ್ಥಾನಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಇದರಲ್ಲಿ 17 ಎಸ್‌ಟಿ ಮೀಸಲು, 9 ಎಸ್‌ಸಿ ಮೀಸಲು ಮತ್ತು 44 ಸಾಮಾನ್ಯ ಮೀಸಲು ಕ್ಷೇತ್ರಗಳು ಸೇರಿದ್ದು, 81.41 ಲಕ್ಷ ಪುರುಷರು, 81.72 ಮಹಿಳೆಯರು, 684 ತೃತೀಯ ಲಿಂಗಿಗಳು ಸೇರಿ 1.63 ಕೋಟಿಗೂ ಅಧಿಕ ಮತದಾರರಿದ್ದಾರೆ.

ಛತ್ತೀಸ್​ಗಢದ 70 ಕ್ಷೇತ್ರಗಳಲ್ಲಿ 51 ಪಕ್ಷಗಳಿಂದ ಒಟ್ಟು 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 130 ಮಹಿಳಾ ಅಭ್ಯರ್ಥಿಗಳು, ಓರ್ವ ತೃತೀಯಲಿಂಗಿ ಸೇರಿದ್ದಾರೆ. ಆಮ್ ಆದ್ಮಿ ಪಕ್ಷ – 44, ಬಿಎಸ್‌ಪಿ – 44, ಕಾಂಗ್ರೆಸ್‌ – 70, ಬಿಜೆಪಿ – 70, ಜೆಸಿಸಿಜೆ – 67 ಮತ್ತು 357 ಸ್ವತಂತ್ರ ಅಭ್ಯರ್ಥಿಗಳು ಹಾಗೂ 304 ಇತರೆ ಅಭ್ಯರ್ಥಿಗಳ ಭವಿಷ್ಯವನ್ನು ಇಂದು ಮತದಾರರು ಬರೆಯಲಿದ್ದಾರೆ.

ಮಧ್ಯಪ್ರದೇಶದಲ್ಲಿ ಒಟ್ಟಾರೆ 5.60 ಕೋಟಿ ಮತದಾರರು 2,533 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲು ಮತ ಚಲಾಯಿಸುತ್ತಿದ್ದಾರೆ. ಮತದಾನಕ್ಕಾಗಿ 230 ಸ್ಥಾನಗಳಲ್ಲಿ 64 ಸಾವಿರದ 523 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 17 ಸಾವಿರ ಸೂಕ್ಷ್ಮ ಮತಗಟ್ಟೆಗಳ ಎಂದು ಗುರುತಿಸಲಾಗಿದೆ. 35 ಸಾವಿರ ಮತಗಟ್ಟೆಗಳನ್ನು ವೆಬ್‌ಕಾಸ್ಟಿಂಗ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.

ಬಿಜೆಪಿ – ಕಾಂಗ್ರೆಸ್ ಎಲ್ಲ 230 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಎಸ್‌ಪಿ 181 ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದರೆ, ಆಮ್ ಆದ್ಮಿ ಪಕ್ಷದಿಂದ 66 ಅಭ್ಯರ್ಥಿಗಳು ಮತ್ತು ಸಮಾಜವಾದಿ ಪಕ್ಷದಿಂದ 71 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರೊಂದಿಗೆ 1,166 ಸ್ವತಂತ್ರ ಅಭ್ಯರ್ಥಿಗಳು, ಒಬ್ಬ ತೃತೀಯಲಿಂಗಿ ಅಭ್ಯರ್ಥಿ ಕೂಡ ಕಣದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!