ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ವಾರ್ ರೂಂ ಕಾರ್ಯಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಇಂದು ಬಿಜೆಪಿ ವಾರ್ ರೂಂ ತೆರೆಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ದ.ಕ. ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದ ಕೆನರಾ ಯೂನಿಯನ್ ಎದುರು 8ನೇ ಮುಖ್ಯ ರಸ್ತೆಯಲ್ಲಿ ಇಂದು ಭಾರತೀಯ ಜನತಾ ಪಾರ್ಟಿಯ ರಾಜ್ಯ ಮಟ್ಟದ ವಾರ್ ರೂಂ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಈ ವಾರ್ ರೂಂನಲ್ಲಿ ಮೀಡಿಯ ಸೆಂಟರ್, ಕಾಲ್ ಸೆಂಟರ್, ಸಾಮಾಜಿಕ ಜಾಲತಾಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ, ಮಾಧ್ಯಮ ಮಿತ್ರರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ ಎಂದು ತಿಳಿಸಿದರು.

ಮುಂದಿನ ಚುನಾವಣೆ ದೃಷ್ಟಿಯಿಂದ ಬಿಜೆಪಿ ಪೇಜ್ ಕಮಿಟಿಯಿಂದ ಆರಂಭಿಸಿ ಬೂತ್ ಸಶಕ್ತೀಕರಣ ಕಾರ್ಯವನ್ನು ಪೂರ್ಣಗೊಳಿಸಿದೆ. ಚುನಾವಣೆಗೆ ಕಾರ್ಯಕರ್ತ ಸೈನಿಕರ ಪೂರ್ಣ ಸಿದ್ಧತೆ ಆಗಿದೆ. ಮತಗಟ್ಟೆಯಲ್ಲೂ ನಮ್ಮ ವಾರ್ ರೂಂಗಳು ಆರಂಭಗೊಂಡಿವೆ. ಇಲ್ಲಿನ ವಾರ್ ರೂಂ ಮೂಲಕ ಜಿಲ್ಲೆ, ಜಿಲ್ಲೆಯಿಂದ ಮಂಡಲ, ಮಂಡಲದಿಂದ ಮತಗಟ್ಟೆವರೆಗೆ, ಮತಗಟ್ಟೆಯಿಂದ ಕಾರ್ಯಕರ್ತ, ಅಲ್ಲಿಂದ ಮತದಾರರನ್ನು ಸಂಪರ್ಕಿಸುವ ಕಾರ್ಯಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್‍ನಲ್ಲಿನ ಗೊಂದಲ, ಅಲ್ಲಿನ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರ ಮೇಲೆ ಬಂದಿರುವ ಭ್ರಷ್ಟಾಚಾರದ ಆರೋಪ, ಇಡಿ ತನಿಖೆಯಿಂದ ಆಗಿರುವ ಮುಜುಗರವನ್ನು ಹಾಗೂ ರಾಜ್ಯದಲ್ಲಿ ಅತಿವೃಷ್ಟಿಯಿಂದ ಹತ್ತಾರು ಜನರ ಸಾವು ಮತ್ತು ಹತ್ತಾರು ಜಿಲ್ಲೆಗಳು ನೆರೆಯಲ್ಲಿರುವ ಸಂದರ್ಭದಲ್ಲಿ ನೂರು ಕೋಟಿ ರೂಪಾಯಿ ಖರ್ಚು ಮಾಡಿ ಸಿದ್ದರಾಮೋತ್ಸವ ಮಾಡಿದ ಪರಿಣಾಮ ರಾಜ್ಯದಲ್ಲೂ ಜನತೆ ಕಾಂಗ್ರೆಸ್ ಪಕ್ಷದ ವಿರುದ್ಧ ಇದ್ದಾರೆ. ಇಂಥ ಕಾಲಘಟ್ಟದಲ್ಲಿ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಹಾಗೂ ಕಾಂಗ್ರೆಸ್ಸಿನ ಆಂತರಿಕ ಜಗಳವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ರಾಜ್ಯದ ಸಿಎಂ ಬದಲಾವಣೆ ಕುರಿತಂತೆ ಟ್ವೀಟ್ ಮಾಡಿ ಗೊಂದಲ ಮೂಡಿಸಲು ಪ್ರಯತ್ನಿಸಿದೆ ಎಂದು ಆಕ್ಷೇಪಿಸಿದರು.
ಆದರೆ ನಮ್ಮ ಸರಕಾರ ಮತ್ತು ಪಕ್ಷದಲ್ಲಿ ಎಲ್ಲೂ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಆಗಿಲ್ಲ. ಈ ಅವಧಿಯ ಪೂರ್ಣದ ವರೆಗೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಇರುತ್ತಾರೆ. 2023ರ ಚುನಾವಣೆಯನ್ನು ನಮ್ಮ ಸರ್ವಸಮ್ಮತಿಯ ನಾಯಕ, ಹಿರಿಯರಾದ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದರು.
ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ, ರಾಜ್ಯಸಭಾ ಸದಸ್ಯ ಜಗ್ಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!