ವಿಪಕ್ಷದ ಧರಣಿಗೆ ವಿಧಾನಸಭೆ ಅಧಿವೇಶನ ಬಲಿ, 3 ದಿನದ ಕಲಾಪ ಮೊಟಕು

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಕಲಾಪ ವಿರೋಧ ಪಕ್ಷದ ಧರಣಿಗೆ ಬಲಿಯಾಗಿದೆ. ಒಟ್ಟು 10 ದಿನಗಳ ಕಾಲ ನಡೆಯಬೇಕಿದ್ದ ಸದನದ ಕಲಾಪ ಏಳನೇ ದಿನಕ್ಕೆ ಮೊಟಕುಗೊಂಡು ಮಾರ್ಚ್ 4ಕ್ಕೆ ಮುಂದೂಡಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ ಮಾಡಿದ್ದಾರೆ.

ಫೆ. 14ರಂದು ಜಂಟಿ ಅಧಿವೇಶನ ಆರಂಭಗೊಂಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಭಯ ಸದನವನ್ನುದ್ದೇಶಿಸಿ ಭಾಷಣ ಮಾಡಿದ್ದರು. ಎರಡನೇ ದಿನ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಆರಂಭಿಸಲಾಗಿತ್ತು. ಮೊದಲೆರಡು ದಿನಗಳ ಕಾಲ ಕಪ್ಪು ಪಟ್ಟಿ ಧರಿಸಿ ಬಂದಿದ್ದ ವಿಪಕ್ಷ ಕಾಂಗ್ರೆಸ್ ಸದಸ್ಯರು ಕಲಾಪಕ್ಕೆ ಅಡ್ಡಿ ನಡೆಸಿರಲಿಲ್ಲ. ಆದರೆ, ಮೂರನೇ ದಿನದಿಂದ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು.

ಐದು ದಿನದ ಕಲಾಪ ಬಲಿ:
ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿರುವುದರಿಂದ ಐದು ದಿನಗಳ ಕಾಲ ಸದನ ಸುಸ್ಥಿತಿಯಲ್ಲಿ ನಡೆಯಲಿಲ್ಲ. ಪ್ರಶ್ನೋತ್ತರಗಳು ನಡೆಯುತ್ತಿದ್ದರೂ ಗದ್ದಲ, ಧರಣಿ ಮುಂದುವರಿದೇ ಇತ್ತು. ಕಲಾಪದ ಆರನೇ ದಿನ ಗದ್ದಲದ ನಡುವೆಯೇ ಸಚಿವರು ಮೂರು ವಿಧೇಯಕಗಳನ್ನು ಮಂಡಿಸಿ, ಸದನದ ಅನುಮೋದನೆ ಪಡೆದಿದ್ದರು.

ಏಳನೇ ದಿನದ ಕಲಾಪ ಬೆಳಗ್ಗೆ 11ಗಂಟೆಗೆ ಪ್ರಾರಂಭಿಸಿದ ಸಭಾಧ್ಯಕ್ಷರು ಸಭಾ ನಾಯಕರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಲು ಅವಕಾಶ ನೀಡಿದರು. ವಂದನಾ ನಿರ್ಣಯ ಸದನದಲ್ಲಿ ಮಂಡನೆಗೊಂಡು ಅಂಗೀಕಾರ ಪಡೆದ ನಂತರ ಪ್ರತಿಪಕ್ಷ ಜೆಡಿಎಸ್ ಚರ್ಚೆಗೆ ಸಿದ್ಧವಿದೆ, ಸದನ ಸುಸ್ಥಿತಿಗೆ ತರುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿತು. ಸಭಾಧ್ಯಕ್ಷರು ವಿಪಕ್ಷದವರಿಗೆ ಧರಣಿಯನ್ನು ವಿಧಾನಸಭೆಯ ಹೊರಗೆ ನಡೆಸಿ, ಸದನದಲ್ಲಿ ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತು ಕಲಾಪ ಮುಂದುವರಿಸಲು ಅವಕಾಶ ನೀಡುವಂತೆ ಕೋರಿದರು.
ಆದರೆ ಅಂತಿಮವಾಗಿ ವಿಪಕ್ಷ ಸದಸ್ಯರು ಈ ಮನವಿ ತಿರಸ್ಕರಿಸಿದ್ದರಿಂದ ಈಗಾಗಲೇ ಸದನದ ಕಲಾಪದಲ್ಲಿ ಐದು ದಿನಗಳು ವ್ಯರ್ಥವಾಗಿದ್ದು, ಉಳಿದ ಮೂರು ದಿನಗಳೂ ವ್ಯರ್ಥವಾಗುವ ಸಾಧ್ಯತೆಯಿರುವುದರಿಂದ ಅಧಿವೇಶನವನ್ನು ಮಾ. 4ಕ್ಕೆ ಮುಂದೂಡಿ ಆದೇಶಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!