ಕೆಲ ದೇಶಗಳಿಗೆ ಭಯೋತ್ಪಾದನೆಯೂ ವಿದೇಶಾಂಗ ನೀತಿಯ ಒಂದು ಭಾಗ: ಪಾಕ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಯೋತ್ಪಾದನೆಯನ್ನು ಎದುರಿಸುವಲ್ಲಿ ಭಾರತ ಯಾವಾಗಲೂ ದೃಢವಾಗಿದೆ. ಆದರೆ, ಕೆಲ ದೇಶಗಳು ಭಯೊತ್ಪಾದಕರಿಗೆ ಬೆಂಗಾವಲಾಗಿ ನಿಂತಿವೆ. ಉಗ್ರ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಹೊಸ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ ಎಂದು ʼನೋ ಮನಿ ಫಾರ್ ಟೆರರ್’ ಜಾಗತಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
“ಭಯೋತ್ಪಾದನೆಯಿಂದಾಗಿ ನಾವು ಸಾವಿರಾರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಆದರೆ ನಾವು ಭಯೋತ್ಪಾದನೆಯ ವಿರುದ್ಧ ಧೈರ್ಯದಿಂದ ಹೋರಾಡಿದ್ದೇವೆ. ಭಯೋತ್ಪಾದನೆಯನ್ನು ಎದುರಿಸುವಲ್ಲಿ ನಾವು ದೃಢವಾಗಿ ಇದ್ದೇವೆ. ಅಂತಹ ಒಂದೇ ಒಂದು ದಾಳಿಯನ್ನು ಸಹ ನಾವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆʼ ಎಂದ ಪ್ರಧಾನಿ ಮೋದಿ, ʼಭಯೋತ್ಪಾದನೆ ವಿರುದ್ಧ ಏಕರೂಪದ ಶೂನ್ಯ ಸಹಿಷ್ಣುತೆಯ ವಿಧಾನʼ ಅನುಸರಿಸಲು ಕರೆ ನೀಡಿದರು.
ಭಯೋತ್ಪಾದನೆಗೆ ಹಣಕಾಸು ಮತ್ತು ನೇಮಕಾತಿಗಾಗಿ ಹೊಸ ರೀತಿಯ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಕೆಲವೊಮ್ಮೆ ಮನಿ ಲಾಂಡರಿಂಗ್ ಮತ್ತು ಆರ್ಥಿಕ ಅಪರಾಧ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಭಯೋತ್ಪಾದಕ ನಿಧಿಗೆ ಹಣ ಸಂಗ್ರಹಿಸಿ ಕೊಡಲಾಗುತ್ತದೆ. ಇಂತಹ ಸಂಕೀರ್ಣ ವಾತಾವರಣದಲ್ಲಿ, ಯುಎನ್‌ಎಸ್‌ಸಿ ಮತ್ತು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಭಯೋತ್ಪಾದನೆಯ ವಿರುದ್ಧದ ಯುದ್ಧಕ್ಕೆ ಸಹಾಯ ಮಾಡುತ್ತಿದೆ ”ಎಂದು ಪಿಎಂ ಮೋದಿ ಹೇಳಿದರು.
ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು, ಅಂತಹ ರಾಷ್ಟ್ರಗಳ ವಿರುದ್ಧ ಉಗ್ರ ಕ್ರಮಕ್ಕೆ ಕರೆ ನೀಡಿದರು. “ಕೆಲವು ದೇಶಗಳು ತಮ್ಮ ವಿದೇಶಾಂಗ ನೀತಿಯ ಭಾಗವಾಗಿ ಭಯೋತ್ಪಾದನೆಯನ್ನು ಬೆಂಬಲಿಸುತ್ತವೆ. ಈ ದೇಶಗಳನ್ನು ಪ್ರತ್ಯೇಕಿಸಬೇಕು. ಯಾವುದೇ ದಾಕ್ಷಿಣ್ಯ ತೋರದೆ ಆ ರಾಷ್ಟ್ರಗಲ ಹಣಕಾಸು ಮೂಲಗಳನ್ನು ತಡೆಹಿಡಿಯಬೇಕು ” ಎಂದು ಅವರು ಹೇಳಿದರು.
ಭಯೋತ್ಪಾದಕರ ವಿರುದ್ಧ ಹೋರಾಡುವುದು ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡುವುದು ಎರಡು ವಿಭಿನ್ನ ಅಂಶಗಳಾಗಿವೆ. ಭಯೋತ್ಪಾದಕರನ್ನು ಶಸ್ತ್ರಾಸ್ತ್ರಗಳಿಂದ ತಟಸ್ಥಗೊಳಿಸಬಹುದು, ಆದರೆ ಭಯೋತ್ಪಾದನೆಯನ್ನು ಸುಧಾರಿತ ಮತ್ತು ದೊಡ್ಡ ಪೂರ್ವಭಾವಿ ಪ್ರತಿಕ್ರಿಯೆಯಿಂದ ಮಾತ್ರವೇ ನಿಗ್ರಹಿಸಬಹುದು. ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕಲು ದೊಡ್ಡ ಹೋರಾಟದ ಅಗತ್ಯವಿದೆ. ಭಯೋತ್ಪಾದನೆ ನಮ್ಮ ಬಳಿಗೆ ಬರುವವರೆಗೆ ನಾವು ಕಾಯಲು ಸಾಧ್ಯವಿಲ್ಲ. ಅದು ಎಲ್ಲಿಯೇ ಇರಲಿ ಬುಡಸಮೇತ ಕಿತ್ತೊಗೆಯಲು ನಾವು ಕಾರ್ಯೋನುಖರಾಗಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!