ಎತ್ತ ಸಾಗುತ್ತಿದೆ ಆಫ್ಘನ್:‌ ಮಸೀದಿ, ಶಾಲೆ ಆಯ್ತು ಇದೀಗ ಮಿನಿ ಬಸ್‌ಗಳ ಮೇಲೆ ಬಾಂಬ್‌ ದಾಳಿ, 9ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಫ್ಘಾನಿಸ್ತಾನದಲ್ಲಿ ಬಾಂಬ್‌ ದಾಳಿಗಳು ನಿಲ್ಲುತ್ತಿಲ್ಲ. ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸುತ್ತಿದೆ. ಇದೀಗ ಗುರುವಾರ ಸಂಜೆ ಅಫ್ಘಾನಿಸ್ತಾನದ ಮಜರ್-ಎ-ಷರೀಫ್‌ನಲ್ಲಿ ಮಿನಿ ಬಸ್‌ಗಳ ಮೇಲೆ ಎರಡು ಬಾಂಬ್ ದಾಳಿ ನಡೆದಿದೆ. ಇಸ್ಲಾಮಿಕ್ ಸ್ಟೇಟ್ ಬಾಂಬ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಬೆಳಗ್ಗೆಯಿಂದ ಸಂಜೆವರೆಗೂ ಉಪವಾಸ ಇದ್ದು ಸಂಜೆ ʻರೋಜಾʼ ಸಮಯದಲ್ಲಿ ಮನೆಗೆ ಹಿಂದಿರುಗುವಾಗ ಬಾಂಬ್‌ ಸ್ಫೋಟ ನಡೆದಿದೆ. ಘಟನೆಯಿಲ್ಲಿ ಒಂಭತ್ತು ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಬಾಲ್ಖ್ ಪ್ರಾಂತೀಯ ಪೊಲೀಸ್ ವಕ್ತಾರ ಆಸಿಫ್ ವಜಿರಿ ತಿಳಿಸಿದ್ದಾರೆ.

ಘಟನೆಯಿಂದ ತಾಲಿಬಾನ್ ಪಡೆ ಅಲರ್ಟ್ ಆಗಿದ್ದಾರೆ. ಬಾಲ್ಖ್ ಪ್ರಾಂತ್ಯದ ರಾಜಧಾನಿ ಮಜರ್-ಇ-ಶರೀಫ್‌ನಲ್ಲಿ ಬಂದೂಕುಧಾರಿಗಳು ಎರಡು ಮಿನಿ ಬಸ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ನಡೆಯುತ್ತಲೇ ಇದೆ. ಕಳೆದ ವಾರ ಮಸೀದಿ ಮತ್ತು ಧಾರ್ಮಿಕ ಶಾಲೆಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 33 ಮಂದಿ ಸಾವನ್ನಪ್ಪಿದ್ದರು. ದಾಳಿಗಳು ಶಿಯಾ ಪಂಗಡವನ್ನು ಗುರಿಯಾಗಿರಿಸಿಕೊಂಡಿವೆ ಎಂದು ಹೇಳಿದ್ದಾರೆ.

ಬಾಂಬ್ ದಾಳಿಗಳಿಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ ಎಂದು ಆಫ್ಘನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಮಸೀದಿ, ಶಾಲೆಗಳಂತಹ ಅಸುರಕ್ಷಿತ ಸ್ಥಳಗಳಲ್ಲಿ ದಾಳಿಗಳು ನಡೆಯುತ್ತಿವೆ, ಘಟನೆಗಳನ್ನು ಗಮನಿಸಿ ಇದೀಗ ನಾವು ಅಂತಹ ಸ್ಥಳಗಳಲ್ಲಿಯೂ ಭದ್ರತೆಯನ್ನು ನಿಯೋಜಿಸಿದ್ದೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!