ಅಂದು ಸೈಕಲಲ್ಲಿ ಅಲೆದು ವ್ಯಾಪಾರ, ಇಂದು 3 ಕೋಟಿ ರೂ. ಉದ್ದಿಮೆ: ಕನ್ನಡಿಗನ ಸಾಧನೆಗೆ ತಲೆಬಾಗಿದ ಶಾರ್ಕ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
12 ವಯಸ್ಸಿನಲ್ಲಿ ಕುಂದಾಪುರದಿಂದ ಬಂದ ಹುಡುಗ, ಹೊಟೆಲಿನಲ್ಲಿ ಮಾಣಿಯಾಗಿದ್ದವ, ಇಂದು 3 ಕೋಟಿಯ ಆದಾಯ… ಇದು ಶಾರ್ಕ್ ಟ್ಯಾಂಕಿನಲ್ಲಿ ಅನಾವರಣಗೊಂಡ ಕನ್ನಡಿಗನೊಬ್ಬನ ಸಾಧನಾಗಾಥೆ. ಇವರ ಹೆಸರು ಭಾಸ್ಕರ್‌ ಕೆ.ಆರ್. ಇಂದು ಮಹಾರಾಷ್ಟ್ರ ಹಾಗು ಕರ್ನಾಟಕದಲ್ಲಿ ಹೆಸರುಗಳಿಸಿರುವ ʼಭಾಸ್ಕರ್‌ ಪೂರನ್‌ ಪೋಳಿ ಘರ್‌ʼ ನ ಸಂಸ್ಥಾಪಕರಿವರು. ಇದೀಗ ಭಾರತದಾದ್ಯಂತ ತಮ್ಮ ಬ್ರ್ಯಾಂಡ್‌ ವಿಸ್ತರಿಸೋಕೆ ಎರಡನೇ ಆವೃತ್ತಿಯ ಶಾರ್ಕ್‌ ಟ್ಯಾಂಕ್‌ ಶೋ ಮೆಟ್ಟಿಲೇರಿದ್ದಾರೆ. ಇಂದು 3 ಕೋಟಿ ರುಪಾಯಿಗೂ ಮೀರಿ ಆದಾಯಗಳಿಸುತ್ತಿರೋ ಇವರ ಕಂಪನಿಯ ಯಶಸ್ಸಿನ ಹಿಂದಿರೋ ರೋಚಕ ಕಥೆಯನ್ನು ಕೇಳಿದ ಶಾರ್ಕ್‌ ಟ್ಯಾಂಕಿನ ನಿರ್ಣಾಯಕರು ಭಾಸ್ಕರರ ಸಾಹಸಕ್ಕೆ ತಲೆಬಾಗಿದ್ದಾರೆ. ಆ ಕಥೆ ಇಲ್ಲಿದೆ ಓದಿ..

ಭಾಸ್ಕರ್‌ ತಮ್ಮ ಊರು ಕುಂದಾಪುರವನ್ನು ತೊರೆದು ಬೆಂಗಳೂರಿನೆಡೆಗೆ ಹೊರಟಾಗ ವಯಸ್ಸಿನ್ನೂ ಕೇವಲ 12. ಆಟವಾಡಿಕೊಂಡಿರಬೇಕಾದ ವಯಸ್ಸಲ್ಲಿ ಸೇರಿಕೊಂಡಿದ್ದು ಹೋಟೆಲ್‌ ಮಾಣಿಯ ಕೆಲಸಕ್ಕೆ. ಮುಂದಿನ ಐದಾರು ವರ್ಷಗಳ ವರೆಗೆ ಅದೇ ಹೊಟೇಲಿನಲ್ಲಿ ಮುಸುರೆ ತಿಕ್ಕುವುದರಿಂದ ಹಿಡಿದು ಎಲ್ಲಾ ಕೆಲಸವನ್ನೂ ಮಾಡಿದರು. ನಂತರದಲ್ಲಿ 1993ರ ವೇಳೆ ಚಲಚಿತ್ರಕ್ಕೆ ನೃತ್ಯಗಾರನಾಗಿ, ನೃತ್ಯ ನಿರ್ದೇಶಕನಾಗಿಯೂ ಕೆಲಸ ಮಾಡಿದರು. ಮುಂದಿನ ಎಂಟು ವರ್ಷಗಳಕಾಲ ಪಾನ್‌ ಶಾಪಿನಿಂದ ಹಿಡಿದು, ಭಜ್ಜಿ-ಬೋಂಡಾ ಅಂಗಡಿ ಹೀಗೆ ಹಲವಾರು ಪ್ರಯತ್ನಗಳನ್ನು ಮಾಡಿ ಕೊನೆಗೆ ಆರಂಭಿಸಿದ್ದು ಹೋಳಿಗೆ ಮಾರಾಟ. ರಸ್ತೆಯಂಚಿನಲ್ಲಿ ಹೋಳಿಗೆ ಯನ್ನು ತಯಾರಿಸುವ ಸಣ್ಣ ಗೂಡಂಗಡಿ ಪ್ರಾರಂಭಿಸಿದಾಗ ಅವರಿಗಿನ್ನೂ 23ರ ವಯಸ್ಸು. ನಿಧಾನವಾಗಿ ಭಾಸ್ಕರರ ಹೋಳಿಗೆ ಯ ರುಚಿ ಜನರಿಗಿಷ್ಟವಾಗ ತೊಡಗಿತು. ಮಾರಾಟ ಹೆಚ್ಚಿದಂತೆಲ್ಲ ರಸ್ತೆಯಂಚಿಗಿನ ಗೂಡಂಗಡಿ ತೆಗೆದು ಹೊಸದೊಂದು ಅಂಗಡಿ ಖರೀದಿಸಿ ಮಾರಾಟ ಮುಂದುವರೆಸಿದರು. ಸಣ್ಣ ಸಣ್ಣ ಪ್ಯಾಕೇಟುಗಳಲ್ಲಿ ಹೋಳಿಗೆ ತುಂಬಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲ ಸೈಕಲ್‌ ಮೇಲೆ ಅಲೆಯುತ್ತಾ ಮಾರಾಟ ಮಾಡಲು ಪ್ರಾರಂಭಿಸಿದರು. ಈ ಪಯಣ ಹೀಗೇ 12 ವರ್ಷ ಸಾಗಿತು. ಅಲ್ಲಿಂದ ಅವರು ಪ್ರಾರಂಭಿಸಿದ್ದೇ ʼಭಾಸ್ಕರ್‌ ಮನೆ ಹೋಳಿಗೆʼ. ಹೀಗೆ ಹುಟ್ಟಿಕೊಂಡ ಅವರ ಹೋಳಿಗೆ ಉದ್ದಿಮೆ ಮುಂದೆ ಕರ್ನಾಟಕದಾದ್ಯಂತ ವಿಸ್ತರಿಸಿತು. ಅವರ ಪ್ರಾಂಚೈಸಿಯ ಅಡಿಯಲ್ಲಿ ಕರ್ನಾಟಕದಾದ್ಯಂತ 17 ಅಂಗಡಿಗಳು ತೆರೆಯಲ್ಪಟ್ಟವು. 18 ಕೋಟಿ ರೂಪಾಯಿಗಳ ವಹಿವಾಟಿನೊಂದಿಗೆ 3.6 ಕೋಟಿ ಆದಾಯ ಗಳಿಸುತ್ತಿದೆ ಭಾಸ್ಕರ್‌ ಮನೆ ಹೋಳಿಗೆ. ನಂತರದಲ್ಲಿ ಮಹಾರಾಷ್ಟ್ರದಲ್ಲಿಯೂ ಮುಂಬೈ, ಪುಣೆ, ಕಲ್ಯಾಣ್‌ ಹೀಗೆ ಹಲವಾರು ಕಡೆಗಳಲ್ಲಿ ʼಭಾಸ್ಕರ್‌ ಪೂರನ್‌ ಪೋಳಿ ಘರ್‌ʼ ಕಾರ್ಯನಿರ್ವಹಿಸುತ್ತಿದೆ.

ತಮ್ಮ ಇನ್ನಿಬ್ಬರು ಸ್ನೇಹಿತರಾದ ವಿಠ್ಠಲ್‌ ಶೆಟ್ಟಿ ಹಾಗು ಸೌರಭ್‌ ಚೌಧರಿಯವರೊಂದಿಗೆ ಶಾರ್ಕ್‌ ಟ್ಯಾಂಕ್‌ ಮೆಟ್ಟಿಲೇರಿದ ಭಾಸ್ಕರ್‌ ಕೆಆರ್‌ ಭಾರತದಾದ್ಯಂತ ತಮ್ಮ ಉದ್ದಿಮೆ ಸ್ಥಾಪಿಸುವ ಗುರಿ ಹೊಂದಿದ್ದಾರೆ. ಜಡ್ಜಸ್‌ ಗಳು ಹೂಡಿಕೆ ಮಾಡಲು ಮುಂದೆ ಬರಲಿಲ್ಲವಾದರೂ ಭಾಸ್ಕರರ ಸಾಧನೆಗೆ ತಲೆಬಾಗಿದ್ದಾರೆ. ಈಗಾಗಲೇ ಯಸಸ್ವಿಯಾಗಿ ನಡೆಯುತ್ತಿರೋ ಉದ್ದಿಮೆ ಶಾರ್ಕ್‌ ಗಳಿಂದ ಹೂಡಿಕೆ ಸಿಕ್ಕಿಲ್ಲವೆಂದರೇನಾಯಿತು ಶೀಘ್ರದಲ್ಲೇ ಭಾರತದಾದ್ಯಂತ ಮಳಿಗೆಗಳನ್ನು ಸ್ಥಾಪಿಸುವ ಆತ್ಮವಿಶ್ವಾಸ ಇವರಿಗಿದೆ. ಹೀಗೆ 12ನೇ ವಯಸ್ಸಿನಲ್ಲಿ ಮನೆಬಿಟ್ಟು ಸೈಕಲಿನಲ್ಲಿ ಅಲೆದು ಮಾರಾಟ ಮಾಡಿ ಕೋಟಿ ಕೋಟಿ ಆದಾಯದ ಉದ್ದಿಮೆ ಸ್ಥಾಪಸಿದ ಭಾಸ್ಕರ್‌ ಕೆಆರ್‌ ಅವರ ಸಾಧನೆ ಇಂದಿನ ನವೋದ್ದಿಮೆಗಳಿಗೆ ಯಶಸ್ಸಿನ ಪಾಠವನ್ನು ಹೇಳುತ್ತದೆ. ಕಠಿಣ ಪರಿಶ್ರಮವಿದ್ದರೆ ಯಶಸ್ಸು ಬೆಂಬತ್ತಿಬರುತ್ತದೆ ಎಂಬುದಕ್ಕೆ ಭಾಸ್ಕರರ ಮನೆ ಹೋಳಿಗೆ ಜೀವಂತ ನಿದರ್ಶನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!