ಎಥರ್ ಸಿಇಒ ಕರ್ನಾಟಕ ಸರಕಾರವನ್ನು ಹೊಗಳಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ‘ನಾನು ಮುಖ್ಯಮಂತ್ರಿಯವರೊಂದಿಗೆ ಪರಿಚಯ ಮಾಡಿಕೊಳ್ಳುವುದಕ್ಕಾಗಿ ಒಳ ಹೋಗಿದ್ದೆ. ಆದರೆ ವಾಪಸ್ ಬರುವ ಹೊತ್ತಿಗೆ 1,000 ಎಥರ್ ಫಾಸ್ಟ್ ಚಾರ್ಜರ್‌ಗಳನ್ನು ಪೂರೈಸುವ ಒಡಂಬಡಿಕೆ ನನ್ನ ಕೈಯಲ್ಲಿತ್ತು. ಇವು ರಾಜ್ಯದ ಉದ್ದಗಲಕ್ಕೆ ಸ್ಥಾಪನೆಯಾಗಲಿವೆ. ಇದನ್ನು ಸಾಕಾರಗೊಳಿಸುವಲ್ಲಿ ಸರ್ಕಾರ ಅದ್ಭುತ ವೇಗ ಮತ್ತು ಬೆಂಬಲವನ್ನು ಪ್ರದರ್ಶಿಸಿದೆ.’

ಹೀಗೆಂದು ಹೇಳಿಕೊಂಡವರು ಎಥರ್ ಎನರ್ಜಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ತರುಣ್ ಮೆಹ್ತಾ.

ಹೌದು, ಇಂಥದ್ದೊಂದು ಭೇಟಿ ಇಂದು ರಾಜ್ಯದ ಶಕ್ತಿಕೇಂದ್ರದಲ್ಲಿ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಪರಿಚಯಿಸಿಕೊಳ್ಳಲು ಬಂದ ತರುಣ್ ಮೆಹ್ತಾ ಅವರ ಮೆ. ಎಥರ್ ಎನರ್ಜಿ ಸಂಸ್ಥೆಯು ರಾಜ್ಯಾದ್ಯಂತ ತ್ವರಿತ ಚಾರ್ಜಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲು ಆದೇಶವನ್ನು ಪಡೆದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಎಥರ್ ಎನರ್ಜಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ತರುಣ್ ಮೆಹ್ತಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ವಿದ್ಯುತ್ ದ್ವಿಚಕ್ರ ವಾಹನಗಳ 1000 ತ್ವರಿತ ಚಾರ್ಜಿಂಗ್ ಸೌಲಭ್ಯ ಸ್ಥಾಪನೆಗೆ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಚಾರ್ಜಿಂಗ್ ಸೌಲಭ್ಯಗಳಿಗೆ ಅಗತ್ಯ ತಾಂತ್ರಿಕ ಬೆಂಬಲವನ್ನು ಎಸ್ಕಾಂಗಳು ನೀಡಲಿದ್ದು, ಸರಕಾರಿ ಸಂಸ್ಥೆಗಳು ಈ ಸೌಲಭ್ಯ ಸ್ಥಾಪನೆಗೆ ಸ್ಥಳಾವಕಾಶ ಒದಗಿಸಲು ಎಸ್ಕಾಂಗಳೊಂದಿಗೆ ಸಮನ್ವಯ ವಹಿಸಲಿವೆ. ಎಥರ್ ಎನರ್ಜಿ ಕಂಪನಿಯು ವಿದ್ಯುತ್ ದ್ವಿಚಕ್ರ ವಾಹನಗಳಿಗೆ ಉಚಿತವಾಗಿ ಚಾರ್ಜಿಂಗ್ ಸೌಲಭ್ಯಗಳನ್ನು ಕಲ್ಪಿಸಲಿವೆ.

ಈ ವೇಳೆ ಶಾಸಕ ಅರವಿಂದ ಬೆಲ್ಲದ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!