ನಾವು ಬಿಜೆಪಿಗೆ ಮತ ಹಾಕ್ತೇವೆ, ಕಾಂಗ್ರೆಸ್ ಗೆ ಹಾಕಲ್ಲ ಎಂದಿದ್ದಕ್ಕೆ ಹಲ್ಲೆ: ‘ಕೈ’ ಕಾರ್ಯಕರ್ತರ ವಿರುದ್ಧ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾವು ಬಿಜೆಪಿಗೆ ಮತ ಹಾಕುತ್ತೇವೆಯೇ ಹೊರತು ಕಾಂಗ್ರೆಸ್‌ಗೆ ಅಲ್ಲ ಎಂದು ಹೇಳಿದ್ದಕ್ಕೆ ಹೆಲ್ಲೆ ನಡೆಸಿರುವ ಘಟನೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ ಹೊರಿಸಲಾಗಿದೆ. ಕೊಪ್ಪಳ ತಾಲೂಕಿನ ಯಳಮಗೇರಿ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.

ದ್ಯಾಮಣ್ಣ ಬಾಲನಗೌಡರ ಹಾಗೂ ಕುಟುಂಬದವರ ಮೇಲೆ ಎಂಟಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ದ್ಯಾಮಣ್ಣ ಗಂಭೀರವಾಗಿ ಗಾಯಗೊಂಡಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ರಾತ್ರಿ ಗ್ರಾಮದಲ್ಲಿ ಕಾಂಗ್ರೆಸ್ ಪರವಾಗಿ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದರು. ದ್ಯಾಮಣ್ಣ ಮನೆಗೆ ಬಂದ ಕಾರ್ಯಕರ್ತರು ಕಾಂಗ್ರೆಸ್​​ಗೆ ಓಟ ಹಾಕುವಂತೆ ಮನವಿ ಮಾಡಿದ್ದಾರೆ. ಈ ವೇಳೆ ದ್ಯಾಮಣ್ಣ ನಾನು ಕಾಂಗ್ರೆಸ್​​ಗೆ ಮತ ಹಾಕಲ್ಲ. ನಾವು ಬಿಜೆಪಿಗೆ ಮತ ಹಾಕುತ್ತೇವೆ ಅಂತ ಹೇಳಿದ್ದಾರೆ.

ಇದೇ ಕಾರಣಕ್ಕೆ ಮಾರಾಮಾರಿ ನಡೆದು ಗವಿಸಿದ್ದಪ್ಪ, ಗಂಗಣ್ಣ, ನೀಲಪ್ಪ, ಬಸವರಾಜ್ ಸೇರಿದಂತೆ ಎಂಟಕ್ಕೂ ಹೆಚ್ಚು ಕಾಂಗ್ರೆಸ್​ ಕಾರ್ಯಕರ್ತರಿಂದ ದ್ಯಾಮಣ್ಣ ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆ ಮಾಡಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!