ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿ, ಧಾರ್ಮಿಕ ಮುಖಂಡ ಶ್ರೀ ಚಿನ್ಮೋಯ್ ಕೃಷ್ಣ ದಾಸ್ ಬಂಧನ ಬೆನ್ನಲ್ಲೇ ISKCON ಬ್ಯಾನ್ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ.
ISKCON ಬಾಂಗ್ಲಾದೇಶದಲ್ಲಿ ಹಿಂದುಗಳ ರಕ್ಷಣೆಗಾಗಿ ಹೋರಾಡುತ್ತಿರುವ ಸಂಘಟನೆ ಆಗಿದೆ. ಇಸ್ಕಾನ್ ಸಂಘಟನೆಯನ್ನು ಧಾರ್ಮಿಕ ಮೂಲಭೂತವಾದಿ ಸಂಘಟನೆ ಎಂದು ಬಾಂಗ್ಲಾ ಸರ್ಕಾರ ಕರೆದಿದೆ. ಅದನ್ನು ಬ್ಯಾನ್ ಮಾಡುವ ಪ್ರಕ್ರಿಯೆ ಶುರುವಾಗಿದೆ ಎಂದು ಘೋಷಣೆ ಮಾಡಿದೆ.
ಬಾಂಗ್ಲಾ ಸರ್ಕಾರದ ನಿರ್ಧಾರ ಪ್ರಶ್ನಿಸಿ ಅಲ್ಲಿನ ಹಿಂದುಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇಸ್ಕಾನ್ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನೆ ಮಾಡಲಾಗಿದೆ. ಅಲ್ಲಿನ ಹೈಕೋರ್ಟ್ ಬಾಂಗ್ಲಾ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಅದಕ್ಕೆ ಬಾಂಗ್ಲಾದೇಶ ಸರ್ಕಾರದ ಅಟಾರ್ನಿ ಜನಲ್, ಇಸ್ಕಾನ್ ಧಾರ್ಮಿಕ ಮೂಲಭೂತವಾದಿ ಸಂಘಟನೆ ಎಂದು ವಾದಿಸಿದ್ದಾರೆ.
ಇಸ್ಕಾನ್ ಕುರಿತ ನಿಲುವು ಮತ್ತು ದೇಶದ ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸಲು ರೂಪುರೇಷಗಳ ಬಗ್ಗೆ ವಿವರಿಸುವಂತೆ ಸರ್ಕಾರಕ್ಕೆ ಕೋರ್ಟ್ ಕೇಳಿದೆ. ಹಿಂದುಗಳ ಮೇಲೆ ದಾಳಿಯಾಗದಂತೆ, ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.
ಬಾಂಗ್ಲಾದೇಶದ ರಂಗಾಪುರ, ಚಿತ್ತಗಾಂಗ್ ಸೇರಿದಂತೆ ವಿವಿಧೆಡೆ ಹಿಂದುಗಳ ರಕ್ಷಣೆಗಾಗಿ ಪ್ರತಿಭಟನೆ, ಹೋರಾಟ ನಡೆಯುತ್ತಿವೆ. ಇಸ್ಕಾನ್ ವಿರುದ್ಧದ ಕ್ರಮಕ್ಕೆ ಭಾರತ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ನವೆಂಬರ್ 25 ರಂದು ಬಾಂಗ್ಲಾದೇಶ ದೇಶದ್ರೋಹದ ಆರೋಪದ ಮೇಲೆ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಂಧಿಸಿದೆ. ಕೋರ್ಟ್ನಲ್ಲಿ ಜಾಮೀನು ನೀಡದೇ ನೇರವಾಗಿ ಜೈಲಿಗೆ ಕಳುಹಿಸಿದೆ. ಇದನ್ನು ಖಂಡಿಸಿ ಚಿನ್ಮೋಯ್ ಬ್ರಹ್ಮಚಾರಿ ಅವರ ಭಕ್ತರು, ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.