ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ ಭಾರತ ತಂಡ ಐಸಿಸಿ ಆಟಗಾರರ ರ‍್ಯಾಂಕಿಂಗ್ ನಲ್ಲಿ ಉತ್ತಮ ಸಾಧನೆ ಮಾಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಹಾಗೂ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಏರೀಕೆ ಕಂಡಿದ್ದಾರೆ.
ಪರ್ತ್ ಟೆಸ್ಟ್ ನಲ್ಲಿ 8 ವಿಕೆಟ್ ಕಬಳಿಸಿದ್ದ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ಬೌಲರ್ ಗಳ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಒಟ್ಟು 883 ಅಂಕಗಳೊಂದಿಗೆ ಬುಮ್ರಾ ಮತ್ತೆ ಅಗ್ರ ಸ್ಥಾನಕ್ಕೆ ಮರಳಿದ್ದು, 872 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ್ ದ್ವಿತೀಯ ಸ್ಥಾನದಲ್ಲಿದ್ದಾರೆ. 860 ಅಂಕಗಳನ್ನು ಹೊಂದಿರುವ ಜಾಶ್ ಹೇಜಲ್ ವುಡ್ 3ನೇ ಸ್ಥಾನದಲ್ಲಿದ್ದು, 807 ಅಂಕಗಳೊಂದಿಗೆ ಭಾರತದ ಆರ್ ಅಶ್ವಿನ್ 4ನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ 6ನೇ ಸ್ಥಾನದಲ್ಲಿದ್ದ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಒಂದು ಸ್ಥಾನ ಕುಸಿದು 7ಸ್ಥಾನಕ್ಕೆ ಕುಸಿದಿದ್ದು ಅವರು ಒಟ್ಟು 794 ಅಂಕಗಳನ್ನು ಹೊಂದಿದ್ದಾರೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 2 ಸ್ಥಾನ ಮೇಲೇರಿ 2ನೇ ಸ್ಥಾನಕ್ಕೆ ಜಿಗಿದಿದ್ದು, ಜೈಸ್ವಾಲ್ ಒಟ್ಟು 825 ಅಂಕಗಳನ್ನು ಹೊಂದಿದ್ದಾರೆ. ಇಂಗ್ಲೆಂಡ್ ತಂಡದ ಜೋ ರೂಟ್ 903 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ.
ಭಾರತದ ರಿಷಬ್ ಪಂತ್ 736 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿ ಮುಂದುವರೆದಿದ್ದು, ಕಳಪೆ ಫಾರ್ಮ್ ನಿಂದಾಗಿ ಕುಸಿದಿದ್ದ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ 689 ಅಂಕಗಳೊಂದಿಗೆ 9 ಸ್ಥಾನ ಮೇಲೇರಿ 13ಸ್ಥಾನಕ್ಕೇರಿದ್ದಾರೆ. ಶುಭಮನ್ ಗಿಲ್ 673 ಅಂಕಗಳೊಂದಿಗೆ ಒಂದು ಸ್ಥಾನ ಕುಸಿದು 17 ಸ್ಥಾನಕ್ಕೆ ಕುಸಿದಿದ್ದಾರೆ.