ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಪ್ರಚೋದನೆ ನೀಡಿದ ಪ್ರಕರಣ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಇಬ್ಬರು ಶಾಸಕರು ಹಾಗೂ ಇತರ 15 ಮಂದಿ ತಪ್ಪಿತಸ್ಥರು ಎಂದು ದೆಹಲಿಯ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.
ಏಳು ವರ್ಷಗಳ ಹಿಂದೆ ಅಂದರೆ 2015ರ ಸೆಪ್ಟೆಂಬರ್ 7ರಂದು ಬುರಾರಿ ಪೊಲೀಸ್ ಠಾಣೆಗೆ ಗುಂಪೊಂದು ನುಗ್ಗಿ ಗಲಭೆ ನಡೆಸಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಗುಂಪಿಗೆ ಶಾಸಕರಾದ ಅಖಿಲೇಶ್ ಪಾಟಿ ತ್ರಿಪಾಠಿ ಮತ್ತು ಸಂಜೀವ್ ಝಾ ಪ್ರಚೋದನೆ ನೀಡಿರುವ ಆರೋಪವಿದೆ. ಇದೀಗ ಇವರನ್ನು ಅಪರಾಧಿಗಳೆಂದು ಇಂದು ಕೋರ್ಟ್ ಹೇಳಿದೆ.
ಪೊಲೀಸರು ಬಂಧನದಲ್ಲಿರಿಸಿದ್ದ ಇಬ್ಬರ ಮೇಲೆ ಹಲ್ಲೆಗೈಯುವ ಸಲುವಾಗಿ ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗುಂಪೊಂದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿತ್ತು. ಗುಂಪು ಹಿಂಸಾಚಾರಕ್ಕೆ ತಿರುಗಿದಾಗ ಸಂಜೀವ್ ಝಾ ಮತ್ತು ಅಖಿಲೇಶ್ ಪಾಟಿ ತ್ರಿಪಾಠಿ ಎಂಬ ಆರೋಪಿಗಳಿಬ್ಬರೂ ಸ್ಥಳದಲ್ಲಿ ಇದ್ದರು. ಗುಂಪನ್ನು ಸಮಾಧಾನಪಡಿಸಲು ಪೊಲೀಸರು ಯತ್ನಿಸಿದರೂ ಶಾಸಕರು ಗುಂಪಿಗೆ ಪ್ರಚೋದನೆ ನೀಡಿ ಹಲ್ಲೆ ಮತ್ತು ಕಲ್ಲು ತೂರಾಟ ನಡೆಸುವಂತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು.
ಇದರ ವಿಚಾರಣೆ ನಡೆಸಿದ ಕೋರ್ಟ್, ಗುಂಪು ಹಿಂಸಾಚಾರಕ್ಕೆ ತಿರುಗಿದಾಗ ಸಂಜೀವ್ ಝಾ ಮತ್ತು ಅಖಿಲೇಶ್ ಪಾಟಿ ತ್ರಿಪಾಠಿ ಎಂಬ ಆರೋಪಿಗಳಿಬ್ಬರೂ ಸ್ಥಳದಲ್ಲಿ ಇದ್ದರು. ಪ್ರಚೋದನೆ ಮತ್ತು ಕುಮ್ಮಕ್ಕು ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿದೆ ಎಂಬುದಾಗಿ ಹೇಳಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ನಿಗದಿಯಾಗಬೇಕಿದೆ.