ನಮ್ಮ ಇಲಾಖೆಯಲ್ಲಿ ಕಳ್ಳರಿದ್ದಾರೆ, ನಾನೇ ಅವರ ನಾಯಕ: ಬಿಹಾರ ಸಿಎಂ ನಿತೀಶ್​ ಅನ್ನು ಪೇಚಿಗೆ ಸಿಲುಕಿಸಿದ ಸಚಿವನ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ನಲ್ಲಿ ನೂತನ ಸರಕಾರ ರಚೆನೆಗೊಂಡ ಬಳಿಕ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದ್ದು, ಇದೀಗ ತನ್ನದೇ ಪಕ್ಷದ ಸಚಿವ ನೀಡಿರುವ ಹೇಳಿಕೆವೊಂದು ಪೇಚಿಗೆ ಸಿಲುಕಿಸಿದೆ.

ಹೌದು, ನಮ್ಮ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದಾರೆ, ನಾನೇ ಅವರ ನಾಯಕ ಎಂದು ಬಿಹಾರ ಕೃಷಿ ಸಚಿವ ಸುಧಾಕರ ಸಿಂಗ್ ಹೇಳಿಕೆ ನೀಡಿದ್ದು, ಈ ಹೇಳಿಕೆ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರಿಗೆ ಮುಜುಗರ ಉಂಟುಮಾಡಿದೆ.

ಬಿಹಾರದ ಕೈಮೂರ್​ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಸಚಿವ ಸಿಂಗ್, ತಮ್ಮದೇ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ‘ನಾನು ಸಚಿವನಾಗಿರುವ ಕೃಷಿ ಇಲಾಖೆಯಲ್ಲಿ ಹಲವಾರು ಕಳ್ಳರಿದ್ದು, ನಾನು ಆ ಕಳ್ಳರ ಸರ್ದಾರ್, ನನ್ನ ಮೇಲೆ ಇನ್ನೂ ಅನೇಕ ನಾಯಕರು ಇದ್ದಾರೆ​’ ಎಂದರು.

ಈ ಮೂಲಕ ಬಿಜೆಪಿ ತೊರೆದು ಕಾಂಗ್ರೆಸ್​ ಮತ್ತು ಆರ್​ಜೆಡಿ ಜತೆ ಮೈತ್ರಿ ಮಾಡಿಕೊಂಡಿರುವ ನಿತೀಶ್​ಕುಮಾರ್​ಗೆ ಭಾರಿ ಮುಜುಗರವನ್ನು ತಂದಿದೆ. ಜತೆಗೆ, ನಿತೀಶ್​ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಕೃಷಿ ಇಲಾಖೆಯಲ್ಲಿ ಕಳ್ಳತನ ಮಾಡದೇ ಇರುವ ಒಂದೇ ಒಂದು ವಿಭಾಗವೂ ಇಲ್ಲ. ಸರ್ಕಾರ ಬದಲಾದರೂ ಸರ್ಕಾರದ ಕಾರ್ಯವೈಖರಿ ಮಾತ್ರ ಮೊದಲಿನಂತೆಯೇ ಇದೆ ಎಂದು ಸುಧಾಕರ ಸಿಂಗ್ ಆರೋಪಿಸಿದ್ದಾರೆ.

ಕೈಮೂರು ಜಿಲ್ಲೆಯಿಂದ ಇಬ್ಬರು ಸಚಿವರಿದ್ದಾರೆ. ಆದರೂ ಪರಿಸ್ಥಿತಿ ಬದಲಾಗಿಲ್ಲ. ಕೈಮೂರ್ ಜಿಲ್ಲೆ ಭ್ರಷ್ಟ ಅಧಿಕಾರಿಗಳಿಂದ ತುಂಬಿಹೋಗಿದೆ. ರೈತರಿಗೆ ಪರಿಹಾರ ನೀಡುವ ನೆಪದಲ್ಲಿ ಬಿಹಾರ ಬೀಜ ನಿಗಮವು 200 ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿದೆಎಂದು ಸಿಂಗ್​ ಆರೋಪಿಸಿದರು.

ಒಬ್ಬರು ಸಚಿವರಿದ್ದಾರೆ. ಇವರು ಈ ಮೊದಲೂ ಸಚಿವರಾಗಿದ್ದರೂ, ಈಗಲೂ ಆಗಿದ್ದಾರೆ. ಇವರಿಂದಾಗಿ ಆಗಲೂ ಇದೇ ರೀತಿ ಭ್ರಷ್ಟತೆ ಇತ್ತು, ಈಗಲೂ ಏನೂ ಬದಲಾಗಲಿಲ್ಲಎಂದು ಅಲ್ಪಸಂಖ್ಯಾತರ ಇಲಾಖೆ ಸಚಿವ ಮೊಹಮ್ಮದ್ ಜಾಮಾ ಖಾನ್ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!