October 9, 2026
Friday, October 9, 2026
spot_img

ಬೆಂಗಳೂರಿನಲ್ಲಿ ಯುವತಿ ಕಿಡ್ನಾಪ್‌ಗೆ ಯತ್ನ: 35 ಕಾರು, 100ಕ್ಕೂ ಹೆಚ್ಚು ಬೈಕ್‌ಗೆ ಡಿಕ್ಕಿ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಕೆ.ಪಿ. ಅಗ್ರಹಾರದ ದಾಸರಹಳ್ಳಿಯ ಮನೆಯಲ್ಲಿದ್ದ ಯುವತಿಯೊಬ್ಬಳನ್ನು ಕಿಡ್ನಾಪ್‌ ಮಾಡಿಕೊಂಡು ಕಾರ್‌ನಲ್ಲಿ ಕೂರಿಸಿಕೊಂಡ ಆರೋಪಿಗಳು ಸಿಕ್ಕ ಸಿಕ್ಕ ವಾಹನಕ್ಕೆ ಗುದ್ದಿಕೊಂಡು ಮುಂದಕ್ಕೆ ಹೋಗಿದ್ದಾರೆ!

ಹೌದು, ಯುವತಿಯನ್ನು ಮನೆಯಿಂದಲೇ ಕಿಡ್ನಾಪ್‌ ಮಾಡಿ ಕಾರಿನಲ್ಲಿ ಕೂರಿಸಿಕೊಂಡು ಸಿನಿಮಾ ಶೈಲಿಯಲ್ಲಿ ಬ್ರೇಕ್‌ ಇಲ್ಲವೇನೋ ಎಂಬಂತೆ ಜಡ್ಜ್‌, ಪೊಲೀಸರ ಹಾಗೂ ಜನಸಾಮಾನ್ಯರ ಕಾರ್‌ ಹಾಗೂ ಬೈಕ್‌ಗಳಿಗೆ ಗುದ್ದಿಕೊಂಡು ಮುಂದಕ್ಕೆ ಸಾಗಿದ್ದಾರೆ. ಈ ಅಪಘಾತಗಳಿಂದಾಗಿ ಆರು ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ರಾಜಸ್ಥಾನದಿಂದ ಬಂದ ಗ್ಯಾಂಗ್‌ ಇದಾಗಿದ್ದು, ಹುಚ್ಚಾಟದಿಂದ ಕಾರ್‌ ಓಡಿಸಿ ಜನರ ಪ್ರಾಣಕ್ಕೆ ಅಪಾಯ ತಂದಿದ್ದಾರೆ. ಬರೋಬ್ಬರಿ 35ಕ್ಕೂ ಹೆಚ್ಚು ಕಾರುಗಳು, 100ಕ್ಕೂ ಹೆಚ್ಚು ಬೈಕ್‌ಗಳಿಗೆ ತಮ್ಮ ಕಾರನ್ನು ಡಿಕ್ಕಿ ಹೊಡೆಸಿದ್ದಾರೆ.

ಹೀರೋಗಿರಿ ತೋರಿ ಯುವತಿಯನ್ನು ಸೇವ್‌ ಮಾಡಿದ ಜನ

ಪೃಥ್ವಿರಾಜ್‌, ಯಶಿಕಾ, ಅಮುಲ್‌, ವರ್ಷ, ಮಣಿ, ಜಯಲಕ್ಷ್ಮೀ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯರು ಚೇಸ್‌ ಮಾಡಿದ್ದಕ್ಕೆ ಹುಚ್ಚಾಟ ಯುವತಿಯನ್ನು ಅಪಹರಿಸಿದ ನಂತರ ಸ್ಥಳೀಯರು ತಮ್ಮ ಬೈಕ್‌ ಹಾಗೂ ಕಾರ್‌ಗಳಲ್ಲಿ ಕಿಡ್ನಾಪ್‌ ಗಾಡಿಯನ್ನು ಹಿಂಬಾಲಿಸಿದ್ದಾರೆ. ಇದರಿಂದ ಗಾಬರಿಯಾದ ಅಪಹರಣಾಕಾರರು ಅಡ್ಡಾದಿಡ್ಡಿ ಕಾರ್‌ ಓಡಿಸಿ ಜನರಿಗೆ ಅಪಾಯ ತಂದೊಡ್ಡಿದ್ದಾರೆ. ಒಟ್ಟಾರೆ 9 ಕಿಮೀ ಚೇಸ್ ಮಾಡಿ ಸಾರ್ವಜನಿಕರು ವಿಜಯನಗರ ಹೊಸಹಳ್ಳಿ 4ನೇ ಅಡ್ಡರಸ್ತೆಯಲ್ಲಿ ದುಷ್ಕರ್ಮಿಗಳ ಕಾರನ್ನು ಅಡ್ಡಗಟ್ಟಿದ್ದಾರೆ. ಮೊದಲೇ ರೊಚ್ಚಿಗೆದ್ದಿದ್ದ ಸಾರ್ವಜನಿಕರು ಕಿಡ್ನಾಪರ್ಸ್ ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಜಖಂಗೊಳಿಸಿದ್ದಾರೆ. ಕಾರಿನಲ್ಲಿದ್ದ ಮೂವರನ್ನು ಹೊರಕ್ಕೆಳೆದು ಬಾರಿಸಿದ್ದಾರೆ.

ಪೊಲೀಸರಿಗೆ ಒಪ್ಪಿಸಿದ ಜನ

ಆರೋಪಿಗಳನ್ನು ಖುದ್ದು ಸಾರ್ವಜನಿಕರೇ ಪೊಲೀಸರ ಬಳಿಗೆ ತಂದು ಒಪ್ಪಿಸಿದ್ದಾರೆ. ರಾಕೇಶ್‌, ಕರಣ್‌ ಹಾಗೂ ಅಯಾನ್‌ ಎನ್ನುವ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಕಾರು ಓಡಿಸುತ್ತಿದ್ದ ಸದ್ದಾಂ ಎಂಬಾತ ಪರಾರಿಯಾಗಿದ್ದಾನೆ.

ಸೋದರತ್ತೆಯಿಂದಲೇ ಸುಪಾರಿ

ಯುವತಿಯನ್ನು ಕಿಡ್ನಾಪ್‌ ಮಾಡೋದಕ್ಕೆ ಆಕೆಯ ಸೋದರತ್ತೆ ಹಣ ನೀಡಿದ್ದರು ಎನ್ನುವ ವಿಷಯ ಬಯಲಿಗೆ ಬಂದಿದೆ. ರಾಜಸ್ಥಾನದ ವಾಸಿ ಪೂಜಾ ಎನ್ನುವಾಕೆ ಬೆಂಗಳೂರಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಬೆಂಗಳೂರಿನಲ್ಲಿಯೇ ಪತಿ ಜೊತೆ ಸೆಟಲ್‌ ಆಗಿದ್ದಳು. ರಾಜಸ್ಥಾನದಲ್ಲಿದ್ದ ಸೋದರತ್ತೆ ಇತ್ತೀಚೆಗೆ ಕರೆ ಮಾಡಿ ವಿಚಾರಿಸಿ ಮನೆಯ ಅಡ್ರೆಸ್‌ ಕೇಳಿದ್ದರು ಎಂದು ಪೂಜಾ ಹೇಳಿಕೊಂಡಿದ್ದಾರೆ.

Must Read