ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುರುವಾರ ಮುಂಜಾನೆ ದ್ವಾರಕಾ ಎಕ್ಸ್‌ಪ್ರೆಸ್‌ವೇಯ ನ್ಯೂ ಪಾಲಂ ವಿಹಾರ್‌ನ ಶ್ರೀ ರಾಮ್ ಚೌಕ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಕಾರ್ಮಿಕರು ರಸ್ತೆಯ ಮಧ್ಯೆ ಗ್ರಿಲ್‌ಗಳನ್ನು ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದಾಗ, ಅತಿ ವೇಗವಾಗಿ ಬಂದ ಕಾರೊಂದು ಅವರ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿರುವ ಮತ್ತಿಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನಾ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಹಿಟ್ ಅಂಡ್ ರನ್ ವಿಡಿಯೋ ವೈರಲ್
ಇದೇ ವೇಳೆ, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಸೆ. 5 ರಂದು ನಡೆದಿದ್ದ ಮತ್ತೊಂದು ಆಘಾತಕಾರಿ ಹಿಟ್ ಅಂಡ್ ರನ್ ಪ್ರಕರಣದ ಸೋಷಿಯಲ್ ಮೀಡಿಯಾ ವಿಡಿಯೋ ಈಗ ವೈರಲ್ ಆಗಿದೆ. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಹುಟ್ಟುಹಬ್ಬದ ದಿನವೇ ದುರಂತ
ಗಾಯಗೊಂಡ ಸಂತ್ರಸ್ತರನ್ನು ಹಿಮಾಂಶು ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮಾಹಿತಿ ನೀಡಿರುವ ಅವರು, ಸೆ. 5 ರಂದು ನನ್ನ ಹುಟ್ಟುಹಬ್ಬ ಇತ್ತು. ಹೀಗಾಗಿ ಕೆಲಸ ಮುಗಿಸಿ ಹೆಂಡತಿಯೊಂದಿಗೆ ಹೊರಗೆ ಹೋಗಿದ್ದೆ. ಏಕ್ ಮೂರ್ತಿ ಚೌಕ್ ಬಳಿ ರಸ್ತೆ ದಾಟುತ್ತಿದ್ದಾಗ ಸುಮಾರು 100 ಕಿ.ಮೀ ಗಿಂತಲೂ ಹೆಚ್ಚಿನ ವೇಗದಲ್ಲಿ ಬಂದ ಕಾರು ನನಗೆ ಡಿಕ್ಕಿ ಹೊಡೆದು ಪರಾರಿಯಾಯಿತು ಎಂದು ತಿಳಿಸಿದ್ದಾರೆ.
ಪೊಲೀಸರಿಂದ ಕ್ರಮ
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ನೋಯ್ಡಾ ಕೇಂದ್ರ ವಲಯದ ಹೆಚ್ಚುವರಿ ಉಪ ಪೊಲೀಸ್ ಕಮಿಷನರ್ ಸ್ವತಂತ್ರ ಸಿಂಗ್ ಅವರು, ಇದು ಸೆ. 5 ರಂದು ಬಿಸ್ರಖ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾನೆ 4:30 ಕ್ಕೆ ನಡೆದ ಘಟನೆಯಾಗಿದೆ. ದೂರು ದಾಖಲಾದ ತಕ್ಷಣ ಕಾರ್ಯಾಚರಣೆ ನಡೆಸಿರುವ ಪೊಲೀಸರು, ತಲೆಮರೆಸಿಕೊಂಡಿದ್ದ ಚಾಲಕನನ್ನು ಬಂಧಿಸಿದ್ದಾರೆ ಮತ್ತು ಅಪಘಾತಕ್ಕೆ ಕಾರಣವಾದ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:
ಇತ್ತೀಚೆಗಷ್ಟೇ ಗುರುಗ್ರಾಮದಲ್ಲಿ ಮಹಿಳಾ ಬೈಕರ್ ಒಬ್ಬರಿಗೆ ಕಾರು ಡಿಕ್ಕಿ ಹೊಡೆದಿದ್ದ ಹಿಟ್ ಅಂಡ್ ರನ್ ಪ್ರಕರಣ ಮಾಸುವ ಮುನ್ನವೇ ಈ ಸರಣಿ ಅಪಘಾತಗಳು ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.



