September 17, 2026
Thursday, September 17, 2026
spot_img

ಕಲಬುರಗಿಯಲ್ಲಿ ಹೈಡ್ರಾಮಾ: ರಾತ್ರೋರಾತ್ರಿ ತಲೆಎತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಬೆಳ್ಳಂಬೆಳಗ್ಗೆ ತೆರವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಸಡಗರದ ನಡುವೆಯೇ ರಾತ್ರೋರಾತ್ರಿ ರಾಜಕೀಯ ಸಂಚಲನವೊಂದು ಸೃಷ್ಟಿಯಾಗಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ನಗರದ ಹೈಕೋರ್ಟ್ ವೃತ್ತದಲ್ಲಿ ಅಭಿಮಾನಿಗಳು ಏಕಾಏಕಿ ಸ್ಥಾಪಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ತೆರವುಗೊಳಿಸಿದ್ದಾರೆ.

ಸದ್ದಿಲ್ಲದೆ ನಡೆದ ಪ್ರತಿಷ್ಠಾಪನೆ

ನಿನ್ನೆ ರಾತ್ರಿ ಯುವಕರ ಗುಂಪೊಂದು ಸ್ಥಳೀಯ ಆಡಳಿತದಿಂದ ಯಾವುದೇ ಪೂರ್ವಾನುಮತಿ ಪಡೆಯದೆ, ರಾತ್ರೋರಾತ್ರಿಯೇ ಈ ಭವ್ಯ ಪ್ರತಿಮೆಯನ್ನು ತಂದು ನಿಲ್ಲಿಸಿದ್ದರು. ಪ್ರತಿಮೆಯು ಬೆಂಬಲಿಗರನ್ನು ಕೈಬೀಸಿ ವಂದಿಸುವ ಭಂಗಿಯಲ್ಲಿದೆ. ಇನ್ನು ಕುತೂಹಲಕಾರಿ ಸಂಗತಿಯೆಂದರೆ, ಮೂರು ವರ್ಷಗಳ ಹಿಂದೆಯೇ ಇದೇ ವೃತ್ತಕ್ಕೆ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ‘ಸಿದ್ದರಾಮಯ್ಯ ಸರ್ಕಲ್’ ಎಂದು ನಾಮಕರಣ ಮಾಡಲಾಗಿತ್ತು. ಇದೀಗ ಈ ಬೆಳವಣಿಗೆ ನಡೆದಿದೆ.

ಬೆಳ್ಳಂಬೆಳಗ್ಗೆ ಪಾಲಿಕೆ ಆಕ್ಷನ್

ಮುಂಜಾನೆ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಅನಧಿಕೃತವಾಗಿ ಸ್ಥಾಪಿಸಲಾಗಿದ್ದ ಪ್ರತಿಮೆಯನ್ನು ತೆರವುಗೊಳಿಸಿ ಪ್ಯಾಕ್ ಮಾಡಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಇದನ್ನೂ ಓದಿ:

ರಾಜಕೀಯ ವಲಯದ ಚರ್ಚೆ

ಈ ಘಟನೆ ಕುರಿತು ಬಿಜೆಪಿ ನಾಯಕ ಆರ್. ಅಶೋಕ ಸೇರಿದಂತೆ ರಾಜಕೀಯ ವಲಯದ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾಗಿದ್ದರೂ ಆಂತರಿಕ ಕಲಹ ಹಾಗೂ ಉತ್ತರಾಧಿಕಾರದ ಯುದ್ಧ ಇನ್ನೂ ಮುಗಿದಿಲ್ಲ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಈ ರಾಜಕೀಯ ಹಗ್ಗಜಗ್ಗಾಟದಿಂದಾಗಿ ಆಡಳಿತ ವ್ಯವಸ್ಥೆ ಹದಗೆಡುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !