ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಎಸ್‌ಪಿ ನಾಯಕರಾದ ಸಂಸದೆ ಡಿಂಪಲ್ ಯಾದವ್ ಅವರ ಆಪ್ತ ಸಹಾಯಕ ನವಾಬ್ ಸಿಂಗ್ ಯಾದವ್ ಅವರನ್ನು ಯುಪಿ ಪೊಲೀಸರು ಬಂಧಿಸಿದ್ದಾರೆ.
ಕನ್ನೌಜ್ ಪೊಲೀಸ್ ಅಧೀಕ್ಷಕ (ಎಸ್‌ಪಿ) ಅಮಿತ್ ಕುಮಾರ್ ಆನಂದ್ ಮಾತನಾಡಿ, ಬೆಳಗಿನ ಜಾವ 1:30 ರ ಸುಮಾರಿಗೆ ಯುಪಿ 112 ಸೇವೆಗೆ ಕರೆ ಬಂದಿದ್ದು, ಹುಡುಗಿಯೊಬ್ಬಳು ವಿವಸ್ತ್ರಳಾಗಿದ್ದಾಳೆ, ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿತ್ತು ಎಂದಿದ್ದಾರೆ.
ಆರೋಪಿ ನವಾಬ್ ಸಿಂಗ್ ಯಾದವ್ ಅವರನ್ನು ಭೇಟಿಯಾಗಲು ಬಾಲಕಿ ತನ್ನ ಚಿಕ್ಕಮ್ಮನೊಂದಿಗೆ ಹೋಗಿದ್ದಳು. ಯಾದವ್ ಉದ್ಯೋಗದ ನೆಪದಲ್ಲಿ ಇಬ್ಬರಿಗೆ ಕರೆ ಮಾಡಿದ್ದರು. ದೂರಿನ ಪ್ರಕಾರ, ತನ್ನ ಚಿಕ್ಕಮ್ಮ ಬಾತ್ರೂಮ್ ಗೆ ಹೋದಾಗ ಯಾದವ್ ತನ್ನ ಮೇಲೆ ಬಲವಂತ ಮಾಡಿದ್ದಾನೆ ಎಂದು ಹುಡುಗಿ ಆರೋಪಿಸಿದ್ದಾಳೆ. ಚಿಕ್ಕಮ್ಮ ಹಿಂತಿರುಗಿ ಬಂದಾಗ ಯಾದವ್ ಒಳ ಉಡುಪಿನಲ್ಲಿ ಇದ್ದದ್ದನ್ನು ನೋಡಿ ಆಕೆ ತಕ್ಷಣ 112 ಗೆ ಕರೆ ಮಾಡಿದರು ಎಂದು ಪೊಲೀಸರು ಹೇಳಿದ್ದಾರೆ.
ಕರೆಯನ್ನು ಅರಿತು ಸ್ಥಳೀಯ ಪೊಲೀಸರು ಮತ್ತು ಪಿಆರ್‌ವಿ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿದವು. ಬಾಲಕಿಯನ್ನು ರಕ್ಷಿಸಲಾಗಿದೆ. ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ನವಾಬ್ ಸಿಂಗ್ ಯಾದವ್ ಲೋಕಸಭಾ ಸಂಸದ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ಸಹಾಯಕರ ಆಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.