ಹೊಸದಿಗಂತ ವರದಿ,ಪಡುಬಿದ್ರಿ:
ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಗೆ ಕಂಚಿನಡ್ಕದಲ್ಲಿ ಅವೈಜ್ಞಾನಿಕ ಟೋಲ್‌ಗೇಟ್ ನಿರ್ಮಾಣ ಹುನ್ನಾರದ ವಿರುದ್ಧ ಪಡುಬಿದ್ರಿ ಉದಯಾದ್ರಿ ದೇವಸ್ಥಾನದ ಬಳಿ ಬೃಹತ್ ಜನಾಗ್ರಹ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ , ಪಡುಬಿದ್ರಿ ಬಳಿಯ ಕಂಚಿನಡ್ಕದಲ್ಲಿ ಟೋಲ್ ಗೇಟ್ ಅಳವಡಿಕೆಗೆ ಮುಂದಾಗುವ ದುರಾಲೋಚನೆ ಬದಿಗಿರಿಸಲಿ. ಕೇವಲ ೬ ಕಿ.ಮೀ ಅಂತರದಲ್ಲಿ ಎರಡು ಟೋಲ್ ಗೇಟ್ ನಿರ್ಮಾಣ ಸಾಧುವಲ್ಲ. ಪ್ರಸ್ತುತ ಆಡಳಿತದಲ್ಲಿ ಅಭಿವೃದ್ಧಿಯ ವಿಚಾರವೇ ಇಲ್ಲವಾಗಿದ್ದು, ಕೇವಲ ಹೋರಾಟದ ಮೂಲಕವೇ ಬದುಕು ಕಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕ್ಷೇತ್ರದ ಜನಪ್ರತಿನಿಧಿಗಳಾಗಲೀ, ನಾಗರೀಕರಾಗಲೀ ಕೈ ಬಳೆ ತೊಟ್ಟಿಲ್ಲ. ಧರ್ಮಾತೀಥ, ಪಕ್ಷಾತೀತವಾಗಿ ಯಾವುದೇ ಆಮಿಷಕ್ಕೆ ಬಲಿಯಾಗದೇ ಒಗ್ಗಟ್ಟಿನ ಹೋರಾಟದ ಮೂಲಕ ಟೋಲ್‌ಗೇಟ್ ನಿರ್ಮಾಣವನ್ನು ಉಗ್ರ ಹೋರಾಟದ ಮೂಲಕ ಬಡಿದಟ್ಟುತ್ತೇವೆ. ಒಂದೇ ತಾಯಿಯ ಮಕ್ಕಳಂತೆ ದೇವರನ್ನು ಮುಂದಿರಿಸಿ ಸ್ವಾರ್ಥ ರಹಿತ ಗಟ್ಟಿ ಧ್ವನಿಯಾಗಿ ಶಾಸಕನಾಗಿ ಹೋರಾಟಗಾರರೊಂದಿಗೆ ಹೋರಾಟದ ಅಖಾಡದಲ್ಲಿರುತ್ತೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬೆಳ್ಮಣ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಮುಖ್ಯಸ್ಥರಾಗಿದ್ದ ಸುಹಾಸ್ ಹೆಗ್ಡೆ ನಂದಳಿಕೆ ಮುಂದಾಳತ್ವದಲ್ಲಿ ಸೂಕ್ತ ಸಮಿತಿಯನ್ನು ರಚಿಸಿ ಜನಾಂದೋಲನ ಉಗ್ರ ಸ್ವರೂಪವನ್ನು ಪಡೆಯಲಿದೆ. ರಾಜಕೀಯ ರಹಿತವಾಗಿ, ಮಂದಿರ ಮಸೀದಿ, ಚರ್ಚ್ ಸಹಿತ ಇತರೇ ಧಾರ್ಮಿಕ ಕೇಂದ್ರಗಳ, ಜಾತಿ ಸಂಘಟನೆಗಳ, ಬಸ್ಸು, ಟೂರಿಸ್ಟ್ ವಾಹನಗಳು, ಮನೆ ಮನೆಯ ಮಹಿಳೆಯರೂ ಸೇರಿ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ನಡುವೆ ಎಲ್ಲಿಯೂ ಟೋಲ್ ವಸೂಲಾತಿ ಕೇಂದ್ರದ ಪ್ರಸ್ತಾವವೇ ಬಾರದ ರೀತಿಯಲ್ಲಿ ಸಂಘಟಿತ ಉಗ್ರ ಹೋರಾಟದ ಕಾವು ಹೆಚ್ಚಿಸಲು ಜನಾಗ್ರಹ ಸಭೆಯಲ್ಲಿ ಮುಂದೆ ಇರಿಸಲಾಯಿತು.
ಬುದ್ಧಿವಂತರ ಜಿಲ್ಲೆಯ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದು, ಕಳೆದ ೧೦ ವರ್ಷಗಳ ಹಿಂದೆ ಯಾವುದೇ ಸರ್ವೀಸ್ ರಸ್ತೆ ಇಲ್ಲದೆ, ಚರಂಡಿ ವ್ಯವಸ್ಥೆ ಇಲ್ಲದೆ ನಿರ್ಮಾಣಗೊಂಡ ೪೦ ಗ್ರಾಮಗಳ ವ್ಯಾಪ್ತಿಯಲ್ಲಿರುವ ೬೧ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ೨೮ ಕಿ.ಮೀ. ಪಡುಬಿದ್ರಿ -ಕಾರ್ಕಳ ರಾಜ್ಯ ಹೆದ್ದಾರಿಗೆ ಸುಂಕವಸೂಲಾತಿ ಕೇಂದ್ರ ನಿರ್ಮಾಣಕ್ಕೆ ಮುಂದಾಗುವ ಬದಲು ಸರಕಾರದ ಭಿಕ್ಷಾ ಪಾತ್ರೆಯನ್ನು ಸಂತೆ ಜಾತ್ರೆಗಳಲ್ಲಿ ಇರಿಸುವುದು ಸೂಕ್ತ. ಜನರ ಬೆನ್ನಿಗೆ ಚೂರಿ ಹಾಕುವ ಕೆಲಸ ಏಕೆ ? ಜನರ ಜೇಬಿಗೆ ಕತ್ತರಿ ಹಾಕಿ ಲೂಟಿ ಹೊಡೆಯುವ ಜನವಿರೋಽ ಕಂಚಿನಡ್ಕ ಟೋಲ್‌ಗೇಟ್ ನಿರ್ಮಾಣ ಇಲ್ಲಿಗೆಯೇ ನಿಲ್ಲಬೇಕು ಎಂದು ಹೋರಾಟಗಾರರು ಸಭೆಯಲ್ಲಿ ಆಗ್ರಹಿಸಿದರು.
ಜನಾಂದೋಲನದ ಮೂಲಕ ಉಗ್ರ ಹೋರಾಟ :
ಕಂಚಿನಡ್ಕ ಪ್ರದೇಶದಲ್ಲಿ ಸುಂಕ ವಸೂಲಾತಿ ಕೇಂದ್ರ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಜನಾಗ್ರಹ ಸಭೆಯ ಮೂಲಕ ರಾಜ್ಯಸರಕಾರಕ್ಕೆ ಒತ್ತಾಯ ಜನವಿರೋಧಿಯಾಗಿರುವ ಈ ಸುಂಕ ವಸೂಲಾತಿ ಕೇಂದ್ರದ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ೪೦ ಹಳ್ಳಿಗಳ ಜನರು ಸೇರಿಕೊಂಡು ಜನಾಂದೋಲನದ ಮೂಲಕ ಉಗ್ರ ಹೋರಾಟ ಮಾಡಲು ಸಿದ್ಧ. ಜನರ ವಿರೋಧದ ನಡುವೆಯೂ ಸುಂಕ ವಸೂಲಾತಿ ಕೇಂದ್ರ ಸ್ಥಾಪಿಸಲು ಸರಕಾರ ಮುಂದಾದರೆ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆಯಾಗಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ಸಭೆಯ ಮೂಲಕ ನೀಡಲಾಯಿತು.
ಸಭೆಯನ್ನುದ್ದೇಶಿಸಿ ಪ್ರಮುಖರಾದ ವಕೀಲ ಸರ್ವಜ್ನ ತಂತ್ರಿ ಬೆಳ್ಮಣ್, ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹಮ್ಮದ್, ಸಾಮಾಜಿಕ ಕಾರ್ಯಕರ್ತೆ ಅನಿತಾ ಡಿಸೋಜ ಬೆಳ್ಮಣ್, ಉಡುಪಿ ಜಿಲ್ಲಾ ಟ್ಯಾಕ್ಸಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಕೆನರಾ ಬಸ್ ಮಾಲಕರ ಸಂಘದ ಜ್ಯೋತಿ ಪ್ರಸಾದ್ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಆರ್‌ಟಿಐ ಕಾರ್ಯಕರ್ತ ರಮಾನಾಥ ಶೆಟ್ಟಿ, ಕೆಪಿಸಿಸಿ ಕೋರ್ಡಿನೇಟರ್ ನವೀನ್‌ಚಂದ್ರ ಜೆ. ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಮುಖರಾದ ಮಿಥುನ್ ಆರ್. ಹೆಗ್ಡೆ, ಮುನಿಯಾಲು ಉದಯ ಕುಮಾರ್ ಶೆಟ್ಟಿ ಉಗ್ರ ಹೋರಾಟದ ರೂಪುರೇಷೆಯ ಬಗ್ಗೆ ಮಾತನಾಡಿದರು.