ಹೊಸದಿಗಂತ ವರದಿ ಹಾಸನ :
ಅಕ್ರಮವಾಗಿ ಸಾಗಾಣೆ ಮಾಡಲು ಹೊರಟಿದ್ದ ಗೋವುಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ರಕ್ಷಿಸಲು ಮುಂದಾದ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ವಾಹನ ಹತ್ತಿಸಲು ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ವಳಲಹಳ್ಳಿ ಬಳಿ ತಡರಾತ್ರಿ ನಡೆದಿದೆ.
ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಬಳಿ ತಡರಾತ್ರಿ ಟಾಟಾ ಏಸ್ ವಾಹನದಲ್ಲಿ ಹತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಅಪರಿಚಿತರ ವಾಹನ ಅಡ್ಡಗಟ್ಟಲು ಹಿಂದೂಪರ ಸಂಘಟನೆ ಕಾರ್ಯಕರ್ತರು ಮುಂದಾಗಿದ್ದಾರೆ. ಈ ವೇಳೆ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ವಾಹನ ಸವಾರ ಹಿಂದೂಪರ ಸಂಘಟನೆ ಕಾರ್ಯಕರ್ತರಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾರೆ. ನಂತರ ವಾಹನವನ್ನು ಚಲಾಯಿಸಿಕೊಂಡು ಹಿಂದೂ ಕಾರ್ಯಕರ್ತರಿಂದ ತಪ್ಪಿಸಿಕೊಂಡು ಹೋಗಿ ನದಿ ದಡದಲ್ಲಿ ನಿಲ್ಲಿಸಿ ವಾಹನ ಚಾಲಕ ಎಸ್ಕೇಪ್ ಆಗಿದ್ದಾನೆ.
ಇಂದು ಮುಂಜಾನೆವರೆಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ವಾಹನವನ್ನು ಹುಡುಕಾಡಿ
ಹತ್ತಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಉಸಿರಾಡಲು ಸಾಧ್ಯವಾಗದೆ ಒಂದು ಜಾನುವಾರು ಸಾವನ್ನಪ್ಪಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಗೋಸಾಗಾಣೆ ಕಣ್ಣಿಗೆ ಕಂಡರು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಯಸಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.