ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಹಾಡಹಗಲೇ ಕುಡುಗೋಲಿನಿಂದ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಅರವಳ್ಳಿ ಗ್ರಾಮದ ಮಕ್ತುಮ್ ತಟಗಾರ್ ಹಲ್ಲೆಗೊಳಗಾದ ವ್ಯಕ್ತಿ. ಮುತ್ತು ಗಣಾಚಾರಿ ಹಲ್ಲೆ ಮಾಡಿದ ಆರೋಪಿ.
ಎಂಟು ತಿಂಗಳ ಹಿಂದಷ್ಟೇ ಗಣಾಚಾರಿ ಮದುವೆಯಾಗಿದೆ. ಆದರೆ, ಮುತ್ತು ಗಣಾಚಾರಿ ಪತ್ನಿಯನ್ನು ಮಕ್ತುಮ್ ತಟಗಾರ್ ಈ ಹಿಂದೆ ಪ್ರೀತಿಸ್ತಿದ್ದನಂತೆ. ಮದುವೆ ಬಳಿಕವೂ ಗಣಾಚಾರಿ ಪತ್ನಿಯ ಜೊತೆ ಮಕ್ತುಮ್ ಸಂಪರ್ಕದಲ್ಲಿ ಇದ್ದನಂತೆ. ಈ ವಿಷಯ ಮುತ್ತು ಗಣಾಚಾರಿಗೆ ಗೊತ್ತಾಗಿದೆ. ಈ ವಿಚಾರವಾಗಿ ಮುತ್ತು ಗಣಾಚಾರಿ ಮತ್ತು ಆತನ ಪತ್ನಿಯ ನಡುವೆ ಗಲಾಟೆಯಾಗಿದೆ.
ಇದರಿಂದ ಮುತ್ತು ಗಣಾಚಾರಿ ಆಕ್ರೋಶಗೊಂಡು, ಸಂತೆಗೆ ಬಂದಿದ್ದ ಮುಕ್ತುಮ್ ತಟಗಾರ್ ಮೇಲೆ ಕುಡುಗೋಲು ಬೀಸಿದ್ದಾನೆ. ಕೆಳಗೆ ಬೀಳುತ್ತಿದ್ದಂತೆ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ.
ಗಂಭೀರವಾಗಿ ಗಾಯಗೊಂಡ ಮಕ್ತುಮ್ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.