Friday, March 24, 2023

Latest Posts

ಚಿತ್ತಾಕುಲ ಗ್ರಾಮ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಸಲು ಪ್ರಯತ್ನ: ರೂಪಾಲಿ ಎಸ್. ನಾಯ್ಕ

ಹೊಸದಿಗಂತ ವರದಿ, ಕಾರವಾರ‍:

ಅತಿದೊಡ್ಡ ಗ್ರಾಮ ಪಂಚಾಯತಿ ಯಾಗಿರುವ ಚಿತ್ತಾಕುಲ ಗ್ರಾಮವನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ಎಸ್. ನಾಯ್ಕ ಅವರು ಹೇಳಿದರು.

ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎನ್‌‌ಎಚ್ -66ರಿಂದ ಗ್ರಾಮ ಪಂಚಾಯತಿ ಹೋಗುವ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಗುರುವಾರ ನೆರವೇರಿಸಿ ಅವರು ಮಾತನಾಡಿದರು.

ಚಿತ್ತಾಕುಲ ಗ್ರಾಮ ನಿರಂತರವಾಗಿ ಬೆಳೆಯುತ್ತಿದೆ. ಅಪಾರ್ಟ್ಮೆಂಟ್, ಕಟ್ಟಡಗಳು, ಅಂಗಡಿಗಳು ಸೇರಿದಂತೆ‌ ವಿವಿಧ ರೀತಿಯಲ್ಲಿ ಬೆಳೆಯುತ್ತಿದೆ. ಅದಕ್ಕಾಗಿ ಇದನ್ನು ಪಟ್ಟಣ ಪಂಚಾಯತಿಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಮುಂದಿನ ದಿನದಲ್ಲಿ ವಾಹನ ದಟ್ಟಣೆ ಹೆಚ್ಚಾಗಬಹುದು ಹಾಗೂ ಗ್ರಾಮದ ಸೌಂದರ್ಯವನ್ನು ಹೆಚ್ಚಿಸಲು ಎನ್‌ಎಚ್‌-66 ರಿಂದ ಗ್ರಾಮ ಪಂಚಾಯತಿ ಕ್ರಾಸ್‌ವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮಧ್ಯದಲ್ಲಿ ಬೀದಿ ದೀಪ, ಡಿವೈಡರ್ ಹಾಗೂ ರಸ್ತೆ ಪಕ್ಕದಲ್ಲಿ ಚರಂಡಿ ಮತ್ತು ಇಂಟರ್‌ಲಾಕ್‌ ಅಳವಡಿಸಲಾಗುತ್ತದೆ. ಗ್ರಾಮ ಪಂಚಾಯತಿಯಿಂದ ಮುಂದೆ ಶಿವಾಜಿ ಚೌಕವರೆಗೆ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ರಸ್ತೆ ಪಕ್ಕದಲ್ಲಿರುವ ಅಂಗಡಿಗಳಿಗೆ ಹಾನಿಯಾಗದಂತೆ ರಸ್ತೆ ಅಭಿವೃದ್ಧಿಯಾಗಲಿದೆ ಎಂದರು.

ಅಸ್ನೋಟಿ ಕೊಳಗೆ ರಸ್ತೆ:
2021-22 ನೇ ಸಾಲಿನ ಅತಿವೃಷ್ಟಿ ಅಡಿ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಔರಾದ ಸದಾಶಿವಗಡ ಎಸ್‌ಎಚ್‌-34ರ ಕಿ.ಮೀ 721.5ರಿಂದ 721.75ರವರೆಗೆ ಮಳೆಯಿಂದ ಹಾಳಾಗಿರುವ ಗಟಾರ, ಸಿಡಿ ದುರಸ್ಥಿ‌ ಹಾಗೂ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಯನ್ನು ಅಸ್ನೋಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಳಗೆಯಲ್ಲಿ ಭೂಮಿ ಪೂಜೆ ನೆರವೇರಿಸಿದರು.

ಮಳೆಗಾಲದಲ್ಲಿ ಔರಾದ ಸದಾಶಿವಗಡ ಮಾರ್ಗದ ಅಸ್ನೋಟಿಯ ಕೊಳಗೆ ಗ್ರಾಮದ ವ್ಯಾಪ್ತಿಯಲ್ಲಿ ಗುಡ್ಡದ ಮಣ್ಣು ಕೊಚ್ಚಿಕೊಂಡು ರಸ್ತೆ ಮೇಲೆ ಬಂದು ಪ್ರತಿ ವರ್ಷ ಸಂಚಾರ ವ್ಯತ್ಯಯವಾಗುತ್ತಿತ್ತು. ಗುಡ್ಡದ ಮಣ್ಣು ತೆಗೆದು ಜನರಿಗೆ ಕಷ್ಟಕ್ಕೆ ತಳ್ಳಿದ್ದರು. ಇದನ್ನು ಮನಗಂಡು ಮಳೆಯಿಂದ ಹಾಳಾಗಿರುವ ರಸ್ತೆ, ಚರಂಡಿ ಹಾಗೂ ಸಿಡಿ ದುರಸ್ಥಿ ಮತ್ತು ರಕ್ಷಣಾ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ನಡೆಸಲು ಭೂಮಿ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನದಲ್ಲಿ ಈ ಸಮಸ್ಯೆ ನಿವಾರಣೆಯಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಆಗಲಿದೆ ಎಂಬ ಸಮಾಧಾನ ಉಂಟಾಗಿದೆ ಎಂದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶ್ರೀ ಸುಭಾಷ್ ಗುನಗಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಪಕ್ಷದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!