ಹೊಸದಿಗಂತ ವರದಿ, ರಾಣೇಬೆನ್ನೂರು:
ಕಳೆದ ಒಂದು ವಾರದಿಂದ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದ ಮೆಡಿಕಲ್ ವಿದ್ಯಾರ್ಥಿ ನವೀನ್ ಗ್ಯಾನಗೌಡ್ರ ಸಾವು ನಿಜಕ್ಕೂ ಮನಸ್ಸಿಗೆ ನೋವನ್ನುಂಟು ಮಾಡಿದೆ. ಕೇವಲ ಇನ್ನೊಂದು ವರ್ಷ ಕಳೆದಿದ್ದರೆ ನವೀನ್ ವೈದ್ಯನಾಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದ, ಇಂತ ಪ್ರತಿಭೆಯನ್ನು ಕಳೆದುಕೊಂಡಿರುವುದಕ್ಕೆ ತುಂಬಾ ಬೇಸರವೆನಿಸಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ತಾಲೂಕಿನ ಚಳಗೇರಿ ಗ್ರಾಮದ ಮೃತ ವಿದ್ಯಾರ್ಥಿ ನವೀನ್ ಮನೆಗೆ ಬುಧವಾರ ರಾತ್ರಿ ಆಗಮಿಸಿ ತಂದೆ ತಾಯಿಯರಿಗೆ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಯಾವುದೋ ಎರಡು ದೇಶಗಳ ಮಧ್ಯೆ ನಮ್ಮವರು ಬಲಿಯಾಗುತ್ತಿರುವುದು ದುರಂತದ ಸಂಗತಿಯಾಗಿದೆ. ಆ ದೇಶದಲ್ಲಿ ಯಾರು ಕಲಿಕೆಗೆ ಹಾಗೂ ವಾಸಿಸಲು ಬಂದಿರುತ್ತಾರೋ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಕರ್ತವ್ಯ ಅವರದ್ದಾಗಿರುತ್ತದೆ ಎಂದರು.
ನಮ್ಮ ದೇಶದಿಂದ ಯಾರು ಕಲಿಕೆಗಾಗಿ ಹಾಗೂ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ತೆರಳಿರುತ್ತಾರೆ ಅಂತವರನ್ನು ಸಂದಿಗ್ಧ ಪರಸ್ಥಿತಿಯಲ್ಲಿ ಅವರನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿ ನಮ್ಮ ದೇಶದ್ದಾಗಬೇಕು. ಲಕ್ಷಗಟ್ಟಲೇ ಜನರು ಉಕ್ರೇನ್‌ನಲ್ಲಿದ್ದಾರೆ ಆದರೆ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಬರುತ್ತಿದ್ದಾರೆ. ಇದನ್ನು ನೋಡಿದರೆ ಸರಕಾರ ವೇಗವಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯದಲ್ಲಿರುವ ಕೇಂದ್ರ ಮಂತ್ರಿಗಳು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಉಕ್ರೇನ್‌ನಲ್ಲಿರುವ ಭಾರತದ ಪ್ರತಿಯೊಬ್ಬ ಪ್ರಜೆಯನ್ನೂ ವೇಗವಾಗಿ ಕರೆದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
ದೇಶದಲ್ಲಿ ಮತ್ತು ರಾಜ್ಯದಲ್ಲಿ ಮೆಡಿಕಲ್ ಕಾಲೇಜ ಹಾಗೂ ಇಂಜನೀಯರಿಂಗ್ ಕಾಲೇಜ್‌ಗಳು ಲೂಟಿ ಹೊಡೆಯಲು ಮಾತ್ರ ಹುಟ್ಟಿಕೊಂಡಿವೆ. ಎಲ್ಲ ರಾಜಕೀಯದವರದೇ ಇದೆ. ಇವರು ಶಿಕ್ಷಣಕ್ಕಾಗಿ ಕಾಲೇಜುಗಳನ್ನು ತೆರೆದಿಲ್ಲ ಇವರು ತೆರೆದಿರುವುದು ಹಣ ಲೂಟಿ ಹೊಡೆಯಲಿಕ್ಕೆ ಹೀಗಾಗಿಯೇ ನವೀನ್ ಉಕ್ರೇನ್‌ನಲ್ಲಿ ಬಲಿಯಾಗಿದ್ದಾನೆ. ನೀವು ಮಾಡಿದ ತಪ್ಪಿಗೆ ದ್ರೋಹಕ್ಕೆ, ಲೂಟಿಗೆ ನವೀನ್ ಬಲಿಯಾಗಿದ್ದಾನೆ, ನೀವು ಸರಿಯಾಗಿ ಶಿಕ್ಷಣ ನೀಡಿ, ಶುಲ್ಕಗಳನ್ನು ಕಡಿಮೆ ಮಾಡಿದ್ದರೆ ನವೀನ್ ಅಲ್ಲಿಗೆ ಹೋಗುತ್ತಿರಲಿಲ್ಲ ಎಂದರು.
ಕೋಟಿಗಟ್ಟಲೇ ಹಣವನ್ನು ಕೇಳಿದರೆ ಒಬ್ಬ ಬಡವ ಇವತ್ತು ಡಾಕ್ಟರ್ ಅಥವಾ ಇಂಜನೀಯರ್ ಆಗಲು ಸಾಧ್ಯವಿದೆಯಾ? ಹೀಗಿರುವಾಗ ಕೋಟಿಗಟ್ಟಲೇ ಲೂಟಿ ಹೊಡೆಯುತ್ತ ತಲೆ ಎತ್ತಿರುವ ಮೆಡಿಕಲ್ ಹಾಗೂ ಇಂಜನೀಯರಿಂಗ್ ಕಾಲೇಜುಗಳೇ ನವೀನ್ ಸಾವಿಗೆ ಕಾರಣ, ರಾಜಕಾರಣಿಗಳ ಮಠಾಧೀಶರ ಮೆಡಿಕಲ್ ಅಥವಾ ಇಂಜನೀಯರ್ ಕಾಲೇಜುಗಳು ಇದ್ದು ಇವರು ನವೀನ್ ಎಂಬ ಪ್ರತಿಭೆಯನ್ನು ಚಿವುಟಿ ಹಾಕಿದರು. ಇನ್ನುಮುಂದೆ ಹೊರ ದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ನೀವು ಅನುಕೂಲ ಮಾಡಿಕೊಡುವ ಯೋಚನೆ ಮಾಡಬೇಕು ಎಂದರು.