July 9, 2026
Thursday, July 9, 2026
spot_img

ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ: ಈ ದಿನ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಭಾನುವಾರದಂದು (ಮೇ 31) ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ತುರ್ತು ನಿರ್ವಹಣಾ ಕಾಮಗಾರಿ

ಇಲ್ಲಿನ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಭಾಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗುತ್ತಿದೆ. ಕಾಮಗಾರಿಗಳನ್ನು ಸುಗಮವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವ ಉದ್ದೇಶದಿಂದ ಇಲ್ಲಿ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

9 ಗಂಟೆಯ ನಂತರ ಇರಲಿದೆ ಸಾಮಾನ್ಯ ಸೇವೆ

ನೇರಳೆ ಮಾರ್ಗದ ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್ ಮೆಜೆಸ್ಟಿಕ್) ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 07 ಗಂಟೆಯಿಂದ ಬೆಳಗ್ಗೆ 09 ಗಂಟೆಯವರೆಗೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.9 ಗಂಟೆಯ ನಂತರ ನೇರಳೆ ಮಾರ್ಗದಲ್ಲಿ ಎಂದಿನಂತೆ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳಲಿವೆ.

ಈ ನಿರ್ಬಂಧಿತ ಅವಧಿಯಲ್ಲೂ ಉಳಿದ ಟರ್ಮಿನಲ್ ಮಾರ್ಗಗಳಲ್ಲಿ ಎಂದಿನಂತೆ ಮೆಟ್ರೋ ರೈಲುಗಳು ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ. ನೇರಳೆ ನೇರಳೆ ಮಾರ್ಗದ ಚಲ್ಲಘಟ್ಟದಿಂದ ಮೈಸೂರು ರಸ್ತೆವರೆಗೆ ರೈಲುಗಳು ಲಭ್ಯವಿರುತ್ತವೆ. ಇತ್ತ ಕೆಂಪೇಗೌಡ ನಿಲ್ದಾಣನಿಂದ (ಮೆಜೆಸ್ಟಿಕ್) ವೈಟ್‌ಫೀಲ್ಡ್‌ವರೆಗೆ (ಕಾಡುಗೋಡಿ) ಎಂದಿನಂತೆ ಸಂಚಾರ ಇರಲಿದೆ.

ಪ್ರಯಾಣಕ್ಕೂ ಮುನ್ನ ಗಮನಿಸಿ

ಅದೇ ರೀತಿ ಹಸಿರು ಮಾರ್ಗದ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್ ವರೆಗೆ ಹಾಗೂ ಹಳದಿ ಮಾರ್ಗದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಚಾರ ಯಾವುದೇ ಅಡ್ಡಿಯಿಲ್ಲದೆ ಇರಲಿದೆ. ಹೀಗಾಗಿ ಪ್ರಯಾಣಿಕರು ಈ ತಾತ್ಕಾಲಿಕ ಸೇವಾ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನಂತಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !