ಹೊಸದಿಗಂತ ವರದಿ, ಬಳ್ಳಾರಿ:
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ವಕೀಲರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳವರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನವಿ ಪತ್ರ ರವಾನಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅದ್ಯಕ್ಷ ಕೆ.ಎರ್ರಿಗೌಡ ಅವರು ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಸುಮಾರು ವರ್ಷಗಳಿಂದ ಅತಿಥ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದು, ಕನಿಷ್ಠ ಸೌಲಭ್ಯಗಳು ಇಲ್ಲವಾಗಿವೆ. ಈ ಕುರಿತು ಕಳೆದ 32 ದಿನಗಳಿಂದ ಪಾಠ ಬೋಧನೆ ಬಹಿಷ್ಕರಿಸಿ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದು, ಇಲ್ಲಿವರೆಗೆ ಯಾವುದೇ ಕ್ರಮವಿಲ್ಲದಂತಾಗಿದೆ. ಕೂಡಲೇ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸುವುದರ ಜೊತೆಗೆ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಸುಮಾರು ಐದುಲಜ್ಷ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುತ್ತಿದ್ದು, ಆದರೇ, ಉಪನ್ಯಾಸಕರಿಗೆ ವೇತನ ಅತ್ಯಂತ ಕಡಿಮೆ ನೀಡಲಾಗುತ್ತಿದೆ. ಇದು ಅವರ ನೆಮ್ಮದಿ ಜೀವನವನ್ನು ಕಸಿದುಕೊಂಡಿದೆ. ಕೂಡಲೇ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು, ಯುಜಿಸಿ ಮಾದರಿಯಲ್ಲಿ ಐವತ್ತು ಸಾವಿರ ರೂ.ವೇತನ ಪಾವತಿಸಬೇಕು, ಪಶ್ಚಿಮ ಬಂಗಾಳ, ದೆಹಲಿ, ಪಂಜಾಬ್ ರಾಜ್ಯ ಮಾದರಿಯಲ್ಲಿ ಎಲ್ಲರಿಗೂ ಸೆವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಎಂ.ನಾಗರಾಜ್ ನಾಯ್ಕ್, ಜಂಟಿ ಕಾರ್ಯದರ್ಶಿ ತ್ರಿವೇಣಿ ಪತ್ತಾರ, ಖಜಾಂಚಿ ಕೆ.ಎನ್.ಈರೆಶ್, ಕಾರ್ಯಕಾರಣಿ ಸಮಿತಿ ಸದಸ್ಯರಾದ ವಿಜಯಕುಮಾರ್, ಮುರ್ತುಜಾ ಅಲಿ, ದುರುಗಪ್ಪ, ಮುರುಗೇಶ್, ಸತ್ತಾರ್ ಸೇರಿದಂತೆ ಇತರರಿದ್ದರು.