ಹೊಸದಿಗಂತ ವರದಿ, ಕೊಡಗು:
ಸಾಹಿತ್ಯಾಸಕ್ತರು ಮತ್ತು ಹೆಚ್ಚು ಶಿಕ್ಷಕರನ್ನು ಸದಸ್ಯರನ್ನಾಗಿಸುವ ಮೂಲಕ ವಿದ್ಯಾರ್ಥಿಗಳನ್ನು ಸಾಹಿತ್ಯಿಕವಾಗಿ ಬೆಳೆಸಲು ಮತ್ತು ಇಂದಿನ ಮಕ್ಕಳಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಿ ಹಮ್ಮಿಕೊಳ್ಳುವಂತೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನಿಸಿದೆ.
ಪರಿಷತ್ತಿನ ನೂತನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ನೂತನ ಕಾರ್ಯಕಾರಿ ಸಮಿತಿಯ ಪ್ರಥಮ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಹೆಚ್ಚು ದತ್ತಿನಿಧಿ ಸ್ಥಾಪಿಸುವ ಮೂಲಕ ಕಸಾಪದ ಕಾರ್ಯಕ್ರಮಗಳಿಗೆ ಭದ್ರ ಬುನಾದಿ ಹಾಕುವಂತೆ ತೀರ್ಮಾನಿಸಿದ ಸಭೆ, ಮಡಿಕೇರಿಯಲ್ಲಿ ಕನ್ನಡ ಭವನ ನಿರ್ಮಿಸುವ ಕುರಿತು ಉಪಸಮಿತಿ ರಚಿಸುವಂತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನ, ಸದಸ್ಯತ್ವ ನೋಂದಣಿ, ದತ್ತಿನಿಧಿ ಸ್ಥಾಪನೆಗೆ ಉಪ ಸಮಿತಿಗಳನ್ನು ರಚಿಸುವಂತೆ ನಿರ್ಧರಿಸಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷ ಕೇಶವ ಕಾಮತ್ ಅವರು, ನೂತನ ಕಾರ್ಯಕಾರಿ ಸಮಿತಿಯ ಜವಾಬ್ದಾರಿಯನ್ನು ಘೋಷಿಸಿದರು.
ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಅಹಮ್ಮದ್ ಮತ್ತು ಪುದಿಯನೆರವನ ರೇವತಿ ರಮೇಶ್, ಕೋಶಾಧಿಕಾರಿಯಾಗಿ ಎಸ್. ಡಿ.ವಿಜೇತ್, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಟಿ.ಪಿ.ರಮೇಶ್, ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೆ.ನಾ.ವೆಂಕಟ ನಾಯಕ್, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಸಹನಾ ಕಾಂತಬೈಲು, ರಮ್ಯಾ ಕೆ.ಜಿ., ಪ್ರೇಮ್ ಕುಮಾರ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಉಪನಿರ್ದೇಶಕಿ ಕೆ.ಟಿ. ದರ್ಶನಾ, ಕೊಡಗು ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ ಅವರನ್ನು ನೇಮಕ ಮಾಡಲಾಯಿತು.
ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿಗಳ ಸದಸ್ಯರ ಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಘೋಷಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ