ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನ್ನು 2 ದಿನಗಳು ಬಾಕಿ ಉಳಿದಿರುವಂತೆ 146 ರನ್ಗಳ ಜಯ ಸಾಧಿಸಿದ್ದು,ಈ ಮೂಲಕ 4-0ಯಲ್ಲಿ ಆ್ಯಶಸ್ ಸರಣಿ ಗೆದ್ದುಕೊಂಡಿದೆ.
3ನೇ ದಿನವಾದ ಇಂದು ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ನಲ್ಲಿ 155ಕ್ಕೆ ಆಲೌಟ್ ಆದರೂ, ಆಂಗ್ಲರಿಗೆ 271 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆದರೆ ಆಂಗ್ಲ ಪಡೆ ಕೇವಲ 124 ರನ್ಗಳಿ ಸರ್ವಪತನ ಕಂಡು ಸೋಲುಂಡಿತು.
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 303 ರನ್ಗಳಿಸಿದರೆ, ಇದಕ್ಕುತ್ತರವಾಗಿ ಇಂಗ್ಲೆಂಡ್ ಕೇವಲ 188ಕ್ಕೆ ಆಲೌಟ್ ಆಗಿ 115 ರನ್ಗಳ ಹಿನ್ನಡೆ ಅನುಭವಿಸಿತ್ತು.
ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿಯ ಮೊದಲ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 4ನೇ ಪಂದ್ಯವನ್ನು ಕೊನೆಯ ಓವರ್ತನಕ ಆಡಿ ಇಂಗ್ಲೆಂಡ್ ಸೋಲಿನಿಂದ ತಪ್ಪಿಸಿಕೊಂಡಿತ್ತು.
ಸರಣಿಯನ್ನು ಸೋಲುವ ಮೂಲಕ ಇಂಗ್ಲೆಂಡ್ ಸತತ 3ನೇ ಬಾರಿ ಆ್ಯಶಸ್ ಸರಣಿಯನ್ನು ಕಳೆದುಕೊಂಡಂತಾಗಿದೆ. ಇಂಗ್ಲೆಂಡ್ ಕೊನೆಯ ಬಾರಿ 2015ರಲ್ಲಿ ತವರಿನಲ್ಲಿ ನಡೆದಿದ್ದ ಸರಣಿಯಲ್ಲಿ 3-2ರಲ್ಲಿ ಗೆಲುವು ಸಾಧಿಸಿತ್ತು.