ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡೆರಡು ಆ್ಯಪ್ ನಲ್ಲಿ ರೈಡ್ ಬುಕ್ ಮಾಡಿ ಇಬ್ಬರೂ ಚಾಲಕರು ಬಂದ ಬಳಿಕ ಒಂದರಲ್ಲಿ ಕ್ಯಾನ್ಸಲ್ ಮಾಡಿದ ಯುವತಿ ಆಟೋ ಚಾಲಕನಿಗೇ ಮನಸೋ ಇಚ್ಛೆ ಬೈದಿರುವ ಘಟನೆ ವರದಿಯಾಗಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕನ್ನಡ ಬಾರದ ಯುವತಿಯೊಬ್ಬಳು ಏಕಕಾಲದಲ್ಲಿ ಓಲಾ ಮತ್ತು ರ್ಯಾಪಿಡೋ ಆ್ಯಪ್ ಗಳಲ್ಲಿ ಆಟೋ ಬುಕ್ ಮಾಡಿದ್ದು, ಈ ವೇಳೆ ಕೊನೆಯ ಕ್ಷಣದಲ್ಲಿ ಒಂದು ಆಟೋ ರೈಡ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಆಟೋ ಚಾಲಕ ಬೇರೆ ಆಟೋ ಹತ್ತಿದ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆಕೆ ಆತನ ಆರೋಪ ನಿರಾಕರಿಸಿದ್ದು, ತಾನು ಬುಕ್ ಮಾಡಿಲ್ಲ ಎಂದು ವಾದಿಸಿದ್ದಾಳೆ. ಇದಕ್ಕೆ ಆಟೋ ಚಾಲಕ ನಾನು ಸುಮಾರು 1.5 ಕಿಮೀ ನಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದು 15 ನಿಮಿಷಗಳಾಗಿವೆ. ಆದರೂ ಕಾದು ನಿಂತಿದ್ದೇನೆ. ಇದೀಗ ಬೇರೆ ಆಟೋದಲ್ಲಿ ಹೋದರೆ ಹೇಗೆ ಎಂದು ಪ್ರಶ್ನಿಸಿದ್ದಾನೆ.
ಇದರಿಂದ ರೊಚ್ಚಿಗೆದ್ದ ಯುವತಿ ಆಟೋ ಚಾಲಕನ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿ ಆತನಿಗೆ ಗುದ್ದಲು ಪ್ರಯತ್ನಿಸಿದ್ದಾಳೆ. ಅಲ್ಲದೆ ಆಟೋ ಮುಂದಕ್ಕೆ ಸಾಗುತ್ತಲೇ ಚಾಲಕನಿಗೆ ನಿಂದನಾತ್ಮಕ ಪದ ಬಳಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಪೊಲೀಸರ ಮಧ್ಯಪ್ರವೇಶ
ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಪೊಲೀಸರು ಮಧ್ಯಪ್ರವೇಶಿಸಿದ್ದು, ಘಟನೆಯ ಸ್ಥಳವನ್ನು ಮತ್ತ ಚಾಲಕನ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ ನೀಡುವಂತೆ ಕೇಳಿದ್ದಾರೆ.