ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಪಂಚ ಗ್ಯಾರಂಟಿಗಳ ಕುರಿತು ಸುಳ್ಳು ಜಾಹೀರಾತು ನೀಡಿದ್ದ ಆರೋಪದ ಮೇಲೆ ಮಹಾರಾಷ್ಟ್ರ ಬಿಜೆಪಿ ಘಟಕದ ವಿರುದ್ಧ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಲು ನಿರ್ಧರಿಸಿದೆ.
ಈ ಕುರಿತು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದು, ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡದೆ ವಂಚಿಸಿದೆ ಎನ್ನುವ ಸುಳ್ಳು ಜಾಹೀರಾತನ್ನು ಪುಟಗಟ್ಟಲೆ ನೀಡಿದ್ದ ಮಹಾರಾಷ್ಟ್ರದ ಬಿಜೆಪಿ ವಿರುದ್ಧ ಕರ್ನಾಟಕ ಸರ್ಕಾರ ಕೇಸು ದಾಖಲಿಸಿ, ಸರಿಯಾದ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ ಆಗದೆ ಕಾಂಗ್ರೆಸ್ ಸರ್ಕಾರ ಕರ್ನಾಟಕ ಜನತೆಗೆ ವಂಚಿಸಿದ್ದಾಗಿ ಮಹಾರಾಷ್ಟ್ರ ಬಿಜೆಪಿ ಘಟಕ ಸುಳ್ಳು ಜಾಹಿರಾತು ನೀಡಿದೆ. ಇವರಿಗೆ ನಾಚಿಕೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಸುಳ್ಳಿನ ಸರದಾರರೇ ಕರ್ನಾಟಕಕ್ಕೆ ಬಂದು ನೋಡಿ. ನಿಮಗೆ ವಿಶೇಷ ವಿಮಾನದ ವ್ಯವಸ್ಥೆ ನಾನೇ ಮಾಡ್ತೀನಿ. ಕರ್ನಾಟಕದಲ್ಲಿ ಗ್ಯಾರಂಟಿಗಳು ಜಾರಿ ಆಗಿಲ್ಲ ಎಂದರೆ ನಾನು ರಾಜೀನಾಮೆ ಕೊಡ್ತೀನಿ. ನಮ್ಮ ನೆಲದಲ್ಲಿ ಗ್ಯಾರಂಟಿಗಳು ಜಾರಿ ಆಗಿರುವುದು ಸತ್ಯ ಆದರೆ ನಿಮ್ಮ ಸುಳ್ಳುನ ಜಾಹಿರಾತನ್ನು ವಾಪಾಸ್ ಪಡೆದು ಮಹಾರಾಷ್ಟ್ರ ಜನತೆಯ ಕ್ಷಮೆ ಕೇಳಬೇಕು. ಈ ಸವಾಲು ಸ್ವೀಕರಿಸುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ವರ್ಷಕ್ಕೆ 56 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಳ ಮೂಲಕ ನಮ್ಮ ರಾಜ್ಯದ ಕೋಟಿ ಕೋಟಿ ಜನರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇಲ್ಲೂ ಮಹಾ ಆಘಾಡಿ ಅಧಿಕಾರಕ್ಕೆ ಬಂದು ಎಲ್ಲಾ ಭರವಸೆಗಳನ್ನು ಈಡೇರಿಸುವುದು ಶತಸಿದ್ದ. ಏಕೆಂದರೆ ನುಡಿದಂತೆ ನಡೆದ ಚರಿತ್ರೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಆದ್ದರಿಂದ ಬಿಜೆಪಿ ಸೋಲಿಸಿ ಆರ್ಥಿಕ ಶಕ್ತಿ ಪಡೆಯಿರಿ ಎಂದು ಹೇಳಿದ್ದಾರೆ.
ಬಿಜೆಪಿ ಜಾಹೀರಾತು ವಿವಾದ ಏನು?
ಕಾಂಗ್ರೆಸ್ ಗ್ಯಾರಂಟಿಗಳನ್ನೇ ಗುರಿಯಾಗಿಸಿಕೊಂಡು ಜಾಹೀರಾತು ನೀಡಿದ್ದ ಬಿಜೆಪಿ, `ಏಕ್ ಹೈ ತೋ ಸೇಫ್ ಹೈ (ಒಟ್ಟಾಗಿದ್ದರೆ ನಾವು ಸುರಕ್ಷಿತ)’ ಎಂಬ ಪ್ರಧಾನಿ ಮೋದಿ ಘೋಷಣೆಯನ್ನು ಜಾಹೀರಾತಾಗಿ ಪ್ರಕಟಿಸಿತ್ತು. ಬಿಜೆಪಿಯ ಈ ಜಾಹೀರಾತನ್ನು ಕಾಂಗ್ರೆಸ್ ಟೀಕಿಸಿತ್ತು.