ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯೂ ಸಹ ಪ್ರಧಾನಿ ನರೇಂದ್ರ ಮೋದಿ ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡಿದ್ದಾರೆ. ಭಾನುವಾರ ಹಿಮಾಚಲ ಪ್ರದೇಶದ ಲೆಪ್ಚಾ ತಲುಪಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟ್ಟರ್‌ನಲ್ಲಿ) ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, ನಮ್ಮ ಕೆಚ್ಚೆದೆಯ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಲು ಹಿಮಾಚಲ ಪ್ರದೇಶದ ಲೆಪ್ಚಾ ತಲುಪಿದೆ ಎಂದು ಬರೆದುಕೊಂಡಿದ್ದರು.
ಬಳಿಕ, ಭಾಷಣ ಮಾಡಿದ ಪ್ರಧಾನಿ ಮೋದಿ, ಅಯೋಧ್ಯೆ ಎಂದರೆ ಭಗವಾನ್ ರಾಮನಿರುವ ಸ್ಥಳ, ಆದರೆ ನನಗೆ ಅಯೋಧ್ಯೆ ಎಂದರೆ ಭಾರತೀಯ ಸೇನೆಯ ಸಿಬ್ಬಂದಿ ಇರುವ ಸ್ಥಳ ಎಂದರು.
ದೀಪಾವಳಿಯಲ್ಲಿ, ನಿಮ್ಮ ಯೋಗಕ್ಷೇಮಕ್ಕಾಗಿ ದೀಪವೂ ಉರಿಯುತ್ತದೆ. ಎಲ್ಲಿ ರಾಮನಿದ್ದಾನೆಯೋ ಅಲ್ಲಿ ಅಯೋಧ್ಯೆ ಇದೆ. ನನಗೆ, ನಮ್ಮ ಸೈನ್ಯವು ನೆಲೆಗೊಂಡಿರುವಲ್ಲಿ, ಅದು ದೇವಾಲಯಕ್ಕಿಂತ ಕಡಿಮೆಯಿಲ್ಲ. ನೀವು ಎಲ್ಲಿದ್ದೀರಿ ಅಲ್ಲೇ ನನ್ನ ಹಬ್ಬ ಎಂದರು.
ಹಿಮಾಲಯದ ರೀತಿ ಎಲ್ಲಿಯವರೆಗೆ ನಮ್ಮ ಯೋಧರು ದೃಢವಾಗಿ ನಿಂತಿರುತ್ತಾರೋ ಅಲ್ಲಿಯವರೆಗೆ ನಮ್ಮ ಭಾರತ ಸುರಕ್ಷಿತವಾಗಿರುತ್ತದೆ ಎಂದು ಸೈನಿಕರ ಸೇವೆಯನ್ನು ನೆನೆದರು.
ಇದೇ ಸಂದರ್ಭದಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸುವ ತಮ್ಮ ಸಂಪ್ರದಾಯದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಕಳೆದ 30 ರಿಂದ 35 ವರ್ಷಗಳಿಂದ ದೀಪಾವಳಿಯನ್ನು ಆಚರಿಸುತ್ತಾ ಬರುತ್ತಿರುವುದಾಗಿ ತಿಳಿಸಿದರು. ಗುಜರಾತ್‌ನ ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗುವುದಕ್ಕಿಂತ ಮುಂಚಿನಿಂದಲೂ ಈ ಆಚರಣೆ ಮಾಡಿಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದರು.
ದೀಪಾವಳಿ ಸಂದರ್ಭದಲ್ಲಿ ಕುಟುಂಬದಿಂದ ದೂರವಿದ್ದು, ಹಬ್ಬ ಆಚರಣೆ ಮಾಡಿದ ಸೈನಿಕರನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಕುಟುಂಬ ಇರುವಲ್ಲಿ ಮಾತ್ರ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಇಂದು ನೀವು ಕುಟುಂಬದಿಂದ ದೂರವಿದ್ದು, ಗಡಿಯಲ್ಲಿ ಠಿಕಾಣಿ ಹೂಡಿದ್ದೀರಿ. ಇದು ಕರ್ತವ್ಯದ ಮೇಲಿನ ನಿಮ್ಮ ಭಕ್ತಿಯ ಪರಾಕಾಷ್ಠೆಯನ್ನು ತೋರಿಸುತ್ತದೆ. ಭದ್ರತಾ ಪಡೆಗಳನ್ನು ನಿಯೋಜಿಸುವ ಸ್ಥಳವು ದೇವಾಲಯಕ್ಕಿಂತ ಕಡಿಮೆಯಿಲ್ಲ ಎಂದು ಹೇಳಿದರು.
ಭಾರತವು ಈಗ ರಕ್ಷಣಾ ವಲಯದಲ್ಲಿ ಜಾಗತಿಕ ನಿರ್ಣಾಯಕನಾಗಿ ಹೊರಹೊಮ್ಮುತ್ತಿದೆ ಮತ್ತು ದೇಶದ ರಕ್ಷಣಾ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ, ಸ್ನೇಹಪರ ರಾಷ್ಟ್ರಗಳ ಅಗತ್ಯಗಳನ್ನೂ ಪೂರೈಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. 2016ರ ದೀಪಾವಳಿ ಮತ್ತು ಈ ವರ್ಷದ ನಡುವೆ, ಭಾರತದ ರಕ್ಷಣಾ ರಫ್ತು ಎಂಟು ಪಟ್ಟು ಹೆಚ್ಚಾಗಿದೆ ಮತ್ತು ದೇಶೀಯ ರಕ್ಷಣಾ ಉತ್ಪಾದನೆಯು ಈಗ 1 ಲಕ್ಷ ಕೋಟಿ ರೂ. ತಲುಪಿದೆ ಎಂದು ಹೇಳಿದರು.