ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮಮಂದಿರದಲ್ಲಿ ಭಕ್ತರು ನೀಡಿದ ಸುಮಾರು 7 ಕೋಟಿಗೂ ಅಧಿಕ ಕಾಣಿಕೆ ಹಣ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಂದಿರದ ಉದ್ಯೋಗಿಯೊಬ್ಬರ ಮನೆಯಿಂದ ನಗದು ವಶಪಡಿಸಿಕೊಂಡ ನಂತರ ವಿವಾದ ತೀವ್ರಗೊಂಡಿದ್ದು, ವಿರೋಧ ಪಕ್ಷಗಳು ತನಿಖೆಗೆ ಒತ್ತಾಯಿಸಿವೆ. ಸದ್ಯ ಉತ್ತರ ಪ್ರದೇಶ ಸರ್ಕಾರವು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ಆಡಳಿತ ಮಂಡಳಿ ಪುನರ್ರಚನೆಗೆ ನೃಪೇಂದ್ರ ಮಿಶ್ರಾ ಒತ್ತಾಯ
ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹಾಲಿ ಇರುವ ಅನೌಪಚಾರಿಕ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಎಂದು ಹೇಳಿದ್ದಾರೆ. ಪ್ರಸ್ತುತ ಸ್ವಯಂಸೇವಕ ಆಧಾರಿತ ವ್ಯವಸ್ಥೆಗಿಂತ, ವೃತ್ತಿಪರ ಆಡಳಿತ ಮಂಡಳಿ ಮತ್ತು ಸ್ಪಷ್ಟ ಹೊಣೆಗಾರಿಕೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನಿಯಮಗಳ ಉಲ್ಲಂಘನೆ ಮತ್ತು ಉಸ್ತುವಾರಿ ಕೊರತೆ
ದೇಣಿಗೆ ಹಣ ಮತ್ತು ಚಿನ್ನಾಭರಣಗಳ ಎಣಿಕೆಗಾಗಿ 2023 ರಿಂದ 2025 ರವರೆಗೆ ಸಿದ್ಧಪಡಿಸಲಾಗಿದ್ದ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆಯ ವಿಧಾನಗಳನ್ನು (SOP) ಪಾಲಿಸದೇ ಇರುವುದೇ ಈ ಲೋಪಕ್ಕೆ ಕಾರಣ ಎಂದು ಮಿಶ್ರಾ ತಿಳಿಸಿದ್ದಾರೆ. ಬ್ಯಾಂಕ್ ಮತ್ತು ಟ್ರಸ್ಟ್ ಅಧಿಕಾರಿಗಳ ನಡುವಿನ ನಿಗಾ ವ್ಯವಸ್ಥೆಯು ಅತ್ಯಂತ ದುರ್ಬಲವಾಗಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಆರೋಪ ನಿರಾಕರಿಸಿದ ರಾಮಮಂದಿರ ಟ್ರಸ್ಟ್
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಯಾವುದೇ ಹಣಕಾಸಿನ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಮಂದಿರದ ಖಾತೆಗಳನ್ನು ನಿಯಮಿತವಾಗಿ ಆಡಿಟ್ ಮಾಡಲಾಗುತ್ತಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದು, ಮಂದಿರದ ಹೆಸರಿಗೆ ಮಸಿ ಬಳಿಯಲು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ದೂರಿದ್ದಾರೆ.



