ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣದ ಎಲ್ಲಾ 8 ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವು ಜುಲೈ 13 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 3 ದಿನಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ಇವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಬಂಧಿತರಲ್ಲಿ ಚಂಪತ್ ರಾಯ್ ಅವರ ಮಾಜಿ ಚಾಲಕನೂ ಸೇರಿದ್ದಾನೆ.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ
ಮಂದಿರಕ್ಕೆ ಬಂದಿದ್ದ ಹಣ, ಚಿನ್ನ ಹಾಗೂ ಬೆಳ್ಳಿ ವಸ್ತುಗಳ ದುರುಪಯೋಗದ ಸುದ್ದಿ ದೇಶಾದ್ಯಂತ ಭಾರಿ ಆಕ್ರೋಶ ಮೂಡಿಸಿದೆ. ಇದರ ಬೆನ್ನಲ್ಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಟ್ರಸ್ಟ್ ಶನಿವಾರವಷ್ಟೇ ಭರವಸೆ ನೀಡಿತ್ತು.
ಆರೋಪಿಗಳಿಗೆ ಸಿಗದ ಕಾನೂನು ನೆರವು: 5 ಲಕ್ಷ ದಂಡದ ಎಚ್ಚರಿಕೆ
ಫೈಜಾಬಾದ್ ಬಾರ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ತನ್ನ ಯಾವುದೇ ಸದಸ್ಯರು ಆರೋಪಿಗಳ ಪರ ವಕಾಲತ್ತು ವಹಿಸಬಾರದು ಎಂದು ಆದೇಶಿಸಿದೆ. ನಿಯಮ ಉಲ್ಲಂಘಿಸುವ ವಕೀಲರಿಗೆ 5 ಲಕ್ಷ ರೂ. ದಂಡ ವಿಧಿಸುವುದಾಗಿ ಎಚ್ಚರಿಸಿದೆ. ಹೀಗಾಗಿ ಆರೋಪಿಗಳಿಗೆ ವಕೀಲರ ನೆರವು ಸಿಗದಂತಾಗಿದೆ.
ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ
ಈ ಹಗರಣದ ಕುರಿತು ಕಾಲಮಿತಿಯ ತನಿಖೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಬೇಸಿಗೆ ರಜೆಯ ನಂತರವೇ ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.



