Sunday, December 3, 2023

Latest Posts

ಇನ್ನೇರಡು ವರ್ಷದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ: ಗೋಪಾಲ್ ಜೀ

ಹೊಸದಿಗಂತ ವರದಿ,ಮೈಸೂರು:

ಇನ್ನೇರಡು ವರ್ಷದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ವಿಶ್ವಹಿಂದೂ ಪರಿಷತ್‌ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ ತಿಳಿಸಿದರು.

ಶನಿವಾರ ರಾತ್ರಿ ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಉಡುಪಿಯ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಸ್ವಾಮಿಯವರ 36 ನೇ ಚಾತುರ್ಮಾಸ್ಯ ಕಾರ್ಯಕ್ರಮದ ಪ್ರಾತ್ಯಕ್ಷಿಕೆಯಲ್ಲಿ ಅಯೋಧ್ಯಾ ಶ್ರೀರಾಮಮಂದಿರ ಕುರಿತು ಉಪನ್ಯಾಸ ನೀಡಿದ ಅವರು,ಶ್ರೀರಾಮಜನ್ಮಭೂಮಿ ಅಯೋಧ್ಯಾ ದೇಶದ ದೊಡ್ಡ ಪರಂಪರೆ, ಇತಿಹಾಸವನ್ನೇ ಹೊಂದಿದೆ. ಅಯೋಧ್ಯಾದಲ್ಲಿ ಶ್ರೀರಾಮಮಂದಿರವನ್ನು ಪ್ರಾಚೀನ ಶೈಲಿ ಹಾಗೂ ಈಗಿನ ಆಧುನೀಕ ತಂತ್ರಜ್ಞಾನವನ್ನು ಬಳಿಸಿಕೊಂಡು ನಿರ್ಮಾಣ ಮಾಡಲಾಗುತ್ತಿದೆ. ಹಗಲು ರಾತ್ರಿ ಎನ್ನದೆ 1600ಕ್ಕೂ ಹೆಚ್ಚು ಮಂದಿ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇನ್ನೂ 350 ಮಂದಿ ಸೇರ್ಪಡೆಗೊಳ್ಳಲಿದ್ದಾರೆ. 7 ಮಂದಿ ತಜ್ಞ ಇಂಜಿನಿಯರ್‌ಗಳು ಯಾವುದೇ ಶುಲ್ಕವನ್ನು ಪಡೆಯದೆ ನಿರ್ಮಾಣ ಕರ‍್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭೂಮಿಯ ಆಳದಲ್ಲಿ 40 ಅಡಿಯ ತನಕ ಅಡಿಪಾಯವನ್ನು ತೆಗೆದು ಭದ್ರಬುನಾದಿಯನ್ನು ಹಾಕಲಾಗಿದೆ. ಸ್ಟೀಲ್ ಹಾಗೂ ಕಬ್ಬಿಣವನ್ನು ಬಳಸದೆ ಕಾಂಕ್ರೆಟ್‌ನಿoದಲೇ ಸಾವಿರಾರು ವರ್ಷಗಳ ಕಾಲ ಬಾಳಿಕೆ ಬರುವಂತೆ ನಿರ್ಮಿಸಲಾಗುತ್ತಿದೆ. ಮೂರು ಮಹಡಿಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ಅಡಿಪಾಯ ಕೆಲಸ, ಮೊದಲ ಮಹಡಿಯ ಕೆಲಸ ಸಂಪೂರ್ಣಗೊoಡಿದೆ.ದೇಶದ ವಿಜ್ಞಾನ ಸಂಸ್ಥೆ ಐಐಟಿಯ ಸೇರಿದಂತೆ ನೂರು ಮಂದಿ ಇಂಜಿನಿಯರ್‌ಗಳು ನಿರ್ಮಾಣ ಕಾರ್ಯವನ್ನು ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರಲ್ಲಿ ಶ್ರೀರಾಮ ದೇವರನ್ನು ಪ್ರತಿಷ್ಠಾಪಿಸಲೆಂದು ಮೂರು ದೇವರ ಮೂರ್ತಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಜಸ್ತಾನದ ಒಬ್ಬರು ಹಾಗೂ ಕರ್ನಾಟಕದ ಇಬ್ಬರು ಶಿಲ್ಪಿಗಳು ಮೂರು ಮೂರ್ತಿಗಳ ಕೆತ್ತನೆ ಕಾರ್ಯ ನಡೆಸುತ್ತಿದ್ದು, ಬರುವ ಅಕ್ಟೋಬರ್ ವೇಳೆ ಇದರ ಕಾರ್ಯ ಪೂರ್ಣಗೊಳ್ಳಲಿದೆ. ಬರುವ ಜನವರಿ ತಿಂಗಳ 30ರೊಳಗೆ ಮಂದಿರದಲ್ಲಿ ಕೆತ್ತಲಾದ ಮೂರು ಮೂರ್ತಿಗಳಲ್ಲಿ ಒಂದು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಾಣ ಪ್ರತಿಷ್ಠಾನೆ ನಡೆಯಲಿದೆ. ಶ್ರೀರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯವನ್ನು ನೆರವೇರಿಸಿದ ಪ್ರಧಾನಮಂತ್ರಿ ನರೇಂದ್ರಮೋದಿಯವರಿoದಲೇ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ಕೂ ಚಾಲನೆ ನೀಡಲಾಗುತ್ತದೆ. ದೇಶದ ಸಾಧು, ಸಂತರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅಯೋಧ್ಯಾದಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರ ವೀಕ್ಷಣೆಗೆ ನಿತ್ಯವೂ ಸಾವಿರಾರು ಮಂದಿ ಪ್ರವಾಸಿಗರು, ಭಕ್ತರು ಬರುತ್ತಿದ್ದಾರೆ. ಆದರೆ ಅವರಿಗೆ ಶ್ರೀರಾಮದೇವರ ವೀಕ್ಷಣೆಗೆ ಯಾವುದೇ ತೊಂದರೆಯಾಗದoತೆ ಶ್ರೀರಾಮಮಂದಿರ ನಿರ್ಮಾಣ ಕಾರ್ಯವನ್ನು ಮುಂದುವರಿಸಲಾಗುತ್ತದೆ ಎಂದು ಹೇಳಿದರು.

ಶ್ರೀರಾಮಮಂದಿರ ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ. ಲಕ್ಷಾಂತರ ಮಂದಿ ಜನರು ವಿವಿಧ ಸೇವೆಯನ್ನು ಸಲ್ಲಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ನಾವೇ ತಡೆ ಹಾಕಿದ್ದೇವೆ. ಎಷ್ಟು ಬೇಕೋ ಅಷ್ಟನ್ನು ತೆಗೆದುಕೊಳ್ಳುತ್ತಿದ್ದೇವೆ. ಶ್ರೀರಾಮಮಂದಿರ ನಿರ್ಮಾಣವಾದ ಬಳಿಕ ಪ್ರವೇಶಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಅಲ್ಲದೇ ಯಾವುದೇ ಸೇವಾ ಶುಲ್ಕಗಳು ಇರುವುದಿಲ್ಲ. ಪೂಜೆಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಸುಮಾರು 2500 ವರ್ಷಗಳಿಂದಲೂ ಭಾರತ ಪರಕೀಯರ ದಾಳಿ, ಆಕ್ರಮಣವನ್ನು ಸಹಿಸಿಕೊಂಡು, ಎದುರಿಸಿಕೊಂಡು ಇನ್ನೂ ಗಟ್ಟಿಯಾಗಿ ನಿಂತಿದೆ ಎಂದರೆ ಅದು ನಮ್ಮ ಹಿಂದೂ ಸಮಾಜದ ಆತ್ಮಶಕ್ತಿಯಾಗಿದೆ. ಅದು ಅದ್ಬುತವಾಗಿದೆ. ಧರ್ಮ, ನ್ಯಾಯದ ಮೇಲೆ ಆಕ್ರಮಣ, ಅನ್ಯಾಯ ನಡೆದಾಗಲೆಲ್ಲಾ ಸಿಡಿದೆದ್ದು ನಿಂತಿದೆ. ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಹಾಗಾಗಿ ಮೃತ್ಯುಂಜಯ ಸಮಾಜವಾಗಿದೆ. ಜಾತ್ಯಾತೀತದ ಹೆಸರಲ್ಲಿ ಸದಾಕಾಲ ಹಿಂದುಗಳಿಗೆ ಅಪಮಾನ, ಅವಮಾನ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಈಗ ರಾಜಕೀಯ ಬದಲಾವಣೆ ಕೂಡ ಆಗಿದೆ. ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಹಾಕುತ್ತಿದೆ. ಭಾರತದ ರಾಷ್ಟ್ರೋತ್ಥಾನ ಪುನಃ ಆಗುತ್ತಿದೆ ಎಂದು ತಿಳಿಸಿದರು.

ಆಶೀರ್ವಚನ ನೀಡಿದ ಉಡುಪಿಯ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಸ್ವಾಮಿ ಮಾತನಾಡಿ, ಅಯೋಧ್ಯಾದಲ್ಲಿ ಶ್ರೀರಾಮಮಂದಿರದಲ್ಲಿ ಮುಂದಿನ ಜನವರಿಯಲ್ಲಿ ಜರಗುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ಕೋಟ್ಯಾಂತರ ಜನರು ಅಯೋಧ್ಯಾಗೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಅಯೋಧ್ಯಾದಲ್ಲಿ ಬರುವ ಜನರಿಗೆಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಿಲ್ಲ. ಹಾಗೂ ಪ್ರಾಣ ಪ್ರತಿಷ್ಠಾನಕ್ಕೂ ಮುಂದೆ ಹಾಗೂ ಆ ಕಾರ್ಯ ನಡೆದ ನಂತರ ಭಕ್ತರು ಬರಬೇಕು ಎಂದು ತಿಳಿಸಿದರು. ಶ್ರೀರಾಮಮಂದಿರ ನಿರ್ಮಾಣದೊಂದಿಗೆ ದೇಶದಲ್ಲಿ ರಾಮರಾಜ್ಯವೂ ನಿರ್ಮಾಣವಾಗಬೇಕಾಗಿದೆ. ಅದಕ್ಕೆ ಜನರು ತಮ್ಮ ಗ್ರಾಮಗಳಲ್ಲಿಯೇ ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!